ನವದೆಹಲಿ:ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅತಿಶಿ ಕ್ರೌಡ್ ಫಂಡಿಂಗ್ ಅಭಿಯಾನ ಪ್ರಾರಂಭಿಸಿದ್ದಾರೆ. ಅಭಿಯಾನದಲ್ಲಿ 40 ಲಕ್ಷ ರೂ. ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಈ ಹಣವನ್ನು ಚುನಾವಣಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಯಾವಾಗಲೂ ಸಾರ್ವಜನಿಕ ದೇಣಿಗೆಗಳನ್ನೇ ಅವಲಂಬಿಸಿದ್ದು, ದೊಡ್ಡ ಉದ್ಯಮಿಗಳಿಂದ ಹಣ ಪಡೆಯುವುದಿಲ್ಲ ಎಂದು ಅತಿಶಿ ಒತ್ತಿ ಹೇಳಿದರು. ಜನರ ಸಣ್ಣ ಸಣ್ಣ ದೇಣಿಗೆಗಳಿಂದಲೇ ಎಎಪಿ ಹಿಂದಿನ ಚುನಾವಣೆಗಳಲ್ಲಿ ಹೇಗೆ ಗೆದ್ದಿತು ಎಂಬುದನ್ನು ನೆನಪಿಸಿಕೊಂಡರು.
"... ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ರಾಜಕೀಯವನ್ನು ಬೆಂಬಲಿಸಿ ಜನ ಹಣ ದಾನ ಮಾಡುತ್ತಿದ್ದಾರೆ. ನಾವು ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಉದ್ಯಮಿಗಳಿಂದ ದೇಣಿಗೆ ಪಡೆಯುವುದಿಲ್ಲ. ಎಎಪಿ ಸರ್ಕಾರ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತದೆ. ಕಾಲ್ಕಾಜಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾನು ಚುನಾವಣಾ ವೆಚ್ಚಗಳಿಗಾಗಿ 40 ಲಕ್ಷ ರೂ.ಗಳ ಕ್ರೌಡ್ ಫಂಡಿಂಗ್ ಅಭಿಯಾನ ಪ್ರಾರಂಭಿಸುತ್ತಿದ್ದೇನೆ. ಚುನಾವಣೆಗಾಗಿ ಈ ಅಭಿಯಾನ ನಡೆಸುವುದು ನನಗೆ ಅಗತ್ಯವಾಗಿದೆ. ಜನರು ತಮಗಿಷ್ಟವಾದಷ್ಟು ಮೊತ್ತವನ್ನು ದಾನ ಮಾಡಬಹುದು" ಎಂದು ಅತಿಶಿ ಸುದ್ದಿಗಾರರಿಗೆ ತಿಳಿಸಿದರು.
ಕ್ರೌಡ್ ಫಂಡಿಂಗ್ ಕೋರಿದ ಮೊದಲ ಹಾಲಿ ಸಿಎಂ: 70,000 ಕೋಟಿ ರೂ.ಗಳ ಬಜೆಟ್ ಮಂಡಿಸಿರುವ ಅತಿಶಿ, ದೇಶದ ಇತಿಹಾಸದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕ್ರೌಡ್ ಫಂಡಿಂಗ್ ಕೋರಿದ ಮೊದಲ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಎಪಿ ನಾಯಕಿ ರೀನಾ ಗುಪ್ತಾ ಹೇಳಿದರು. ಎಎಪಿ ರಚನೆಯಾದಾಗಿನಿಂದಲೂ ಅದು ಚುನಾವಣೆಯಲ್ಲಿ ಸ್ಪರ್ಧಿಸಲು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಅವರು ಹೇಳಿದರು.