ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಬಿಜೆಪಿಯತ್ತ ಮತ್ತೊಬ್ಬ ಕಾಂಗ್ರೆಸ್​ ನಾಯಕನ ಪುತ್ರಿ; ಇಂದು ದೆಹಲಿಯಲ್ಲಿ ಪಕ್ಷ ಸೇರ್ಪಡೆ ಸಾಧ್ಯತೆ - Shaun George

ಅನಿಲ್​ ಆ್ಯಂಟನಿ, ಪಿಸಿ ಜಾರ್ಜ್​ ಅವರ ಪುತ್ರರನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದಿದ್ದು, ಈಗ ಇನ್ನೊಬ್ಬ ಕಾಂಗ್ರೆಸ್​ ಹಿರಿಯ ನಾಯಕರ ಪುತ್ರಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಕಾಂಗ್ರೆಸ್​ ನಾಯಕನ ಪುತ್ರಿ
ಕಾಂಗ್ರೆಸ್​ ನಾಯಕನ ಪುತ್ರಿ

By ETV Bharat Karnataka Team

Published : Mar 7, 2024, 12:41 PM IST

ಕೊಚ್ಚಿ (ಕೇರಳ):ಕೇರಳದಲ್ಲಿ ಕಾಂಗ್ರೆಸ್​ ನಾಯಕರ ಪುತ್ರರ ಬಿಜೆಪಿ ವಲಸೆ ಮುಂದುವರಿದಿದೆ. ರಾಜ್ಯದ ಹಿರಿಯ ಕಾಂಗ್ರೆಸ್​ ನಾಯಕ ಕೆ. ಕರುಣಾಕರನ್​ ಅವರ ಪುತ್ರಿ, ಸಂಸದ ಮುರಳೀಧರನ್​ ಅವರ ಸಹೋದರಿ ಪದ್ಮಜಾ ವೇಣುಗೋಪಾಲ್​ ಅವರು, ಕಮಲ ಪಕ್ಷ ಸೇರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಮುಂದಿನ ಲೋಕಸಭೆ ಚುನಾವಣೆಯ ಟಿಕೆಟ್​ ಪಡೆಯುವ ಸಾಧ್ಯತೆಯೂ ಇದೆ.

ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಪದ್ಮಜಾ ಅವರು ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಕಡೆಗೆ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಖಾತೆ ಆರಂಭಿಸುವ ಗುರಿ ಹಾಕಿಕೊಂಡಿರುವ ಕಮಲ ಪಕ್ಷವೂ ಕೂಡ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ.

ನಡ್ಡಾ ಭೇಟಿಯಾದ ಪದ್ಮಜಾ:ಪದ್ಮಜಾ ವೇಣುಗೋಪಾಲ್​ ಅವರು ಈಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗುರುವಾರ ಪಕ್ಷದ ಸದಸ್ಯತ್ವವನ್ನು ಔಪಚಾರಿಕವಾಗಿ ಸ್ವೀಕರಿಸಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಪದ್ಮಜಾ ಅವರಿಗೆ ಕೇರಳದ ಎರ್ನಾಕುಲಂ ಅಥವಾ ಚಾಲಕುಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸೂಚನೆಗಳೂ ಇವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.

ಕೆಟಿಡಿಸಿ ಮಾಜಿ ಅಧ್ಯಕ್ಷೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪದ್ಮಜಾ ಅವರು ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಮುಗಿದ ರಾಜ್ಯಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದರು. ಆದರೆ, ಐಯುಎಂಎಲ್‌ ಜೊತೆ ಮೈತ್ರಿ ಕಾರಣ ಆ ಸ್ಥಾನವನ್ನು ನಿರಾಕರಿಸಲಾಗಿತ್ತು. ಇದರಿಂದ ಕಾಂಗ್ರೆಸ್​ ನಾಯಕನ ಪುತ್ರಿ ಅಸಮಾಧಾನಗೊಂಡಿದ್ದರು. ಬಳಿಕ ಬಿಜೆಪಿ ಸೇರುವ ವದಂತಿಗಳು ಆರಂಭವಾಗಿದ್ದವು.

ಮೊದಮೊದಲು ವದಂತಿಯನ್ನು ನಿರಾಕರಿಸಿದ ಪದ್ಮಜಾ ಅವರು, ಇದೀಗ ಅಧಿಕೃತವಾಗಿಯೇ ಕಾಂಗ್ರೆಸ್​ ತೊರೆಯಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದೇನೆ ಎಂದು ಅವರೇ ಬಹಿರಂಗವಾಗಿ ಹೇಳಿದ್ದರು. ಈ ಹಿಂದೆ ಅವರು 2000ನೇ ಇಸ್ವಿಯಲ್ಲಿ ಮುಕುಂದಪುರಂ ಕ್ಷೇತ್ರದಿಂದ ಲೋಕಸಭೆಗೆ ಮತ್ತು 2021 ರಲ್ಲಿ ತ್ರಿಶೂರ್​ನಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಸೋಲುಂಡಿದ್ದರು.

ಕಾಂಗ್ರೆಸ್ ದಿಗ್ಗಜ ಪುತ್ರರ ವಲಸೆ:ಪದ್ಮಜಾ ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದಲ್ಲಿ ಕಾಂಗ್ರೆಸ್​ ದಿಗ್ಗಜ ನಾಯಕರ ಪುತ್ರರ ಮೂರನೇ ವಲಸೆ ಇದಾಗಲಿದೆ. ಈಗಾಗಲೇ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವಕ್ತಾರರಾಗಿರುವ ಅವರು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದಾರೆ.

ಇನ್ನೊಬ್ಬ ಕಾಂಗ್ರೆಸ್ ನಾಯಕ ಪಿಸಿ ಜಾರ್ಜ್ ಅವರ ಪುತ್ರ ಶಾನ್ ಜಾರ್ಜ್ ಬಿಜೆಪಿ ಸೇರಿದ್ದಾರೆ. ಕೇರಳ ರಾಜಕೀಯದ ಇಬ್ಬರು ದಿಗ್ಗಜರ ಪುತ್ರರನ್ನು ಸೇರಿಸಿಕೊಂಡಿರುವ ಬಿಜೆಪಿಗೆ ಇದು ದೊಡ್ಡ ಮುನ್ನಡೆಯಾಗಿದೆ.

ಇದನ್ನೂ ಓದಿ;ಹಿರಿಯ ಕಾಂಗ್ರೆಸ್‌ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆ

ABOUT THE AUTHOR

...view details