ರಾಯ್ಬರೇಲಿ (ಉತ್ತರಪ್ರದೇಶ):ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರಗಳಾದ ಉತ್ತರಪ್ರದೇಶದ ರಾಯ್ಬರೇಲಿ ಮತ್ತು ಅಮೇಠಿ ಗೆಲುವು ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದೆ. 2019 ರ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಸೋತರೂ ರಾಯ್ಬರೇಲಿಯಲ್ಲಿ ಮಾತ್ರ ಪಕ್ಷ ಗೆಲುವು ಸಾಧಿಸಿತ್ತು. ಈ ಬಾರಿ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಭಾರಿ ಕಸರತ್ತು ಮಾಡುತ್ತಿದೆ.
ರಾಯ್ಬರೇಲಿ ಕ್ಷೇತ್ರದಿಂದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಮೇಠಿಯಿಂದ ಸೋನಿಯಾ ಗಾಂಧಿ ಅವರ ಆಪ್ತ ವಲಯದ ಕಿಶೋರ್ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಇಬ್ಬರ ಶತಾಯಗತಾಯ ಗೆಲುವಿಗಾಗಿ ಮಾಜಿ ಮುಖ್ಯಮಂತ್ರಿಗಳಿಗೆ ಇದರ ಹೊಣೆಯನ್ನು ನೀಡಲಾಗಿದೆ.
ಮಾಜಿ ಸಿಎಂಗಳ ಮೇಲೆ ಗೆಲುವಿನ ಭಾರ:ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂಬ ಕಾರಣಕ್ಕಾಗಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ. ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಹೊಣೆಯನ್ನು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ, ಅಮೇಠಿ ಕ್ಷೇತ್ರದ ಹೊಣೆಯನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಆದೇಶಿಸಿದ್ದಾರೆ.
ಉತ್ತರಪ್ರದೇಶದ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದರೂ, ಈ ಎರಡಕ್ಕೆ ಮಾತ್ರ ಕೊನೆಯಲ್ಲಿ ಅಭ್ಯರ್ಥಿಗಳನ್ನು ಹೆಸರಿಸಲಾಯಿತು. ಅಮೇಠಿ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಈ ಬಾರಿ ರಾಯ್ಬರೇಲಿಯಿಂದ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಳೆದ ಸಲದ ಚುನಾವಣೆಯಲ್ಲಿ ಅವರು ಅಮೇಠಿಯಿಂದ ಸ್ಪರ್ಧೆ ಮಾಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಅವರು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಅಮೇಠಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರು ಕಣದಲ್ಲಿದ್ದು, ಇವರ ವಿರುದ್ಧ ಕಿಶೋರಿಲಾಲ್ ಶರ್ಮಾ ಅವರು ಸೆಣಸಬೇಕಿದೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಹೊಣೆಯನ್ನು ನೀಡಲಾಗಿದ್ದು, ಫಲಿತಾಂಶ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೊನೆಯಲ್ಲಿ ಅಭ್ಯರ್ಥಿ ಘೋಷಣೆ:ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಕ್ಷೇತ್ರಕ್ಕೆ ಭಾರೀ ಜಿದ್ದಾಜಿದ್ದಿನಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನಾಮಪತ್ರ ಸಲ್ಲಿಕೆಗೆ ಒಂದು ಬಾಕಿ ಇರುವಾಗ ಕಾಂಗ್ರೆಸ್ ತನ್ನ ಹುರಿಯಾಳುಗಳನ್ನು ಪ್ರಕಟಿಸಿತ್ತು. ಇದಕ್ಕೂ ಮೊದಲು ಬಿಜೆಪಿ ರಾಯ್ಬರೇಲಿಯಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತು. ಪ್ರಿಯಾಂಕಾ ಗಾಂಧಿ ಅವರು ರಾಯ್ಬರೇಲಿಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಭಾವಿಸಲಾಗಿತ್ತು. ಪಕ್ಷ ಅವರ ಬದಲಿಗೆ ರಾಹುಲ್ ಗಾಂಧಿಗೆ ಮಣೆ ಹಾಕಿದೆ. ರಾಹುಲ್ ಗಾಂಧಿ ಅವರು ಈಗಾಗಲೇ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡಿದ್ದಾರೆ.
ಇದನ್ನೂ ಓದಿ:ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಉಮೇದುವಾರಿಕೆ ಸಲ್ಲಿಕೆ; ₹20 ಕೋಟಿ ಆಸ್ತಿ ಘೋಷಣೆ - Rahul Gandhi Nomination