ಚೆನ್ನೈ/ನವದೆಹಲಿ:ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ I.N.D.I.A ಕೂಟದ ಸದಸ್ಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನೊಂದಿಗೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 9, ಡಿಎಂಕೆ 21 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.
ಹಲವು ಸುತ್ತಿನ ಮಾತುಕತೆಗಳ ನಂತರ ಎಐಎಡಿಎಂಕೆ ಮತ್ತು ಬಿಜೆಪಿಗೆ ದೊಡ್ಡ ಸಂದೇಶ ರವಾನಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮುಂಬರುವ ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ತ್ವರಿತವಾಗಿ ಮುಗಿಸಿದೆ. ಆದರೆ, ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ ಎಂಬುದು ನಿಖರವಾಗಿಲ್ಲ.
ಸಮನ್ವಯದಂತೆ ಕಾಂಗ್ರೆಸ್ 9 ಮತ್ತು ಪುದುಚೇರಿಯಲ್ಲಿ 1 ಸ್ಥಾನದಲ್ಲಿ ಸ್ಪರ್ಧಿಸಲಿದೆ. ಡಿಎಂಕೆ 21 ಸ್ಥಾನಗಳಲ್ಲಿ ಕಣಕ್ಕಿಳಿದರೆ, ಇತರ ಸಣ್ಣ ಪಕ್ಷಗಳ ಪೈಕಿ ಸಿಪಿಐ 2 ಸ್ಥಾನ, ಸಿಪಿಐ-ಎಂ 2, ಎಂಡಿಎಂಕೆ 1, ವಿಸಿಕೆ 2, ಐಯುಎಂಎಲ್ 1 ಮತ್ತು ಕೆಎಂಡಿಕೆ 1 ಸ್ಥಾನದಲ್ಲಿ ಅಭ್ಯರ್ಥಿಗಳನ್ನು ಇಳಿಸಲಿವೆ. ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರ ಎಂಎನ್‌ಎಂ ಪಕ್ಷವು ಮೈತ್ರಿಕೂಟಕ್ಕೆ ಸೇರಿದೆ. 2019ರಲ್ಲೂ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಿ 8 ಸ್ಥಾನಗಳನ್ನು ಗೆದ್ದಿತ್ತು. ತಮಿಳುನಾಡಿನಲ್ಲಿ ಒಟ್ಟು 39 ಸ್ಥಾನಗಳ ಪೈಕಿ 38ರಲ್ಲಿ ಡಿಎಂಕೆ ಮೈತ್ರಿಕೂಟ ಗೆದ್ದಿತ್ತು.