ನವದೆಹಲಿ:ಲೋಕಸಭೆ ಚುನಾವಣೆಗೆ ಏಪ್ರಿಲ್ 16ರಂದು ನಡೆದ 2ನೇ ಹಂತದ ಮತದಾನ ಮುಕ್ತಾಯವಾಗಿದೆ. 13 ರಾಜ್ಯಗಳ 88 ಕ್ಷೇತ್ರಗಳಿಗೆ ಜರುಗಿದ ಈ ಚುನಾವಣೆಯಲ್ಲಿ ಕೇರಳದಲ್ಲಿ ಎಲ್ಲ 20 ಕ್ಷೇತ್ರಗಳು ಮತ್ತು ಕರ್ನಾಟಕ, ರಾಜಸ್ಥಾನದಲ್ಲಿ ಗಮನಾರ್ಹವಾದ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ. ಮತದಾನ ಮುಗಿದ ಮರು ದಿನವೇ ಪಕ್ಷದಲ್ಲಿ ಈ ಲೆಕ್ಕಾಚಾರ ಆರಂಭವಾಗಿದೆ.
ಲೋಕಸಭೆಯ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಏಪ್ರಿಲ್ 19ರಂದು 21 ರಾಜ್ಯಗಳ 102 ಕ್ಷೇತ್ರಗಳು ಮತ್ತು ಎರಡನೇ ಹಂತದಲ್ಲಿ ಏಪ್ರಿಲ್ 16ರಂದು 88 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಂಡಿದೆ. ಶುಕ್ರವಾರ ಕೇರಳದ ಎಲ್ಲ 20 ಕ್ಷೇತ್ರಗಳಿಗೂ ಮತದಾನ ನಡೆದಿದೆ. ಈ ಬಾರಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಲ್ಲಿ ಮರು ಆಯ್ಕೆಯಾಗಲಿದ್ದಾರೆ. 2019ರ ಚುನಾವಣೆಯ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವಿನ ದಾಖಲೆಯನ್ನು ಈ ಸಲ ರಾಹುಲ್ ಮುರಿಯಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ರಾಹುಲ್ ಗಾಂಧಿ ಈ ಬಾರಿ ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ. 2019ರಲ್ಲಿ ಅವರ ಸ್ಪರ್ಧೆಯು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ 19 ಕ್ಷೇತ್ರಗಳ ಗೆಲುವಿಗೆ ಕೊಡುಗೆ ನೀಡಿತ್ತು. ನಾವು ಈ ಬಾರಿ ಎಲ್ಲ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕೇರಳದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪಿ. ವಿಶ್ವನಾಥನ್ 'ಈಟಿವಿ ಭಾರತ್'ಗೆ ತಿಳಿಸಿದರು.
ಕಾಂಗ್ರೆಸ್ ಶಾಸಕ ಪಿ.ವಿಷ್ಣುನಾಥ್ ಮಾತನಾಡಿ, ಕೇರಳದ ರಾಜಕೀಯ ಹೋರಾಟವು ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಡುವೆ ಇದ್ದರೂ, ರಾಷ್ಟ್ರ ರಾಜಕೀಯದಲ್ಲಿ 'ಇಂಡಿಯಾ' ಮೈತ್ರಿಕೂಟ ಮತ್ತು ಎನ್‌ಡಿಎ ಮೈತ್ರಿಕೂಟದ ನಡುವಿನ ಸ್ಪರ್ಧೆ ಎಂದು ಜನತೆ ಅರಿತುಕೊಂಡಿದ್ದಾರೆ. ಇಲ್ಲಿನ ಮತದಾರರು ಬಹಳ ವಿದ್ಯಾವಂತರು ಮತ್ತು ಜಾಗೃತರು. ಕಾಂಗ್ರೆಸ್ ಬೆಂಬಲಿಸಿ ರಾಷ್ಟ್ರೀಯ ಚುನಾವಣೆಗೆ ಮತ ಹಾಕುತ್ತಿದ್ದೇವೆ ಎಂದು ಅವರಿಗೆ ತಿಳಿದಿತ್ತು. ಸಿಪಿಐಎಂಗೆ ರಾಷ್ಟ್ರಮಟ್ಟದಲ್ಲಿ ಪ್ರಾಮುಖ್ಯತೆ ಇಲ್ಲ. ಕೆಲ ಸಮಯದ ಹಿಂದೆ ಎಡಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗ ರಚನೆಗೆ ಕಸರತ್ತು ನಡೆಸುತ್ತಿದ್ದವು. ಆದರೆ, ಅವರಿಗೆ ಮತದಾರರನ್ನು ಸೆಳೆಯಲು ಆಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮತ್ತು ಬಿಜೆಪಿ ಆಡಳಿತದ ರಾಜಸ್ಥಾನದಲ್ಲಿ ಕೇಸರಿ ಪಕ್ಷವು ಮತದಾರರನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್ ಈ ಎರಡೂ ರಾಜ್ಯಗಳಲ್ಲಿ ಎದುರಾಳಿ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದಿದ್ದರೆ, ರಾಜಸ್ಥಾನದ ಎಲ್ಲ 25 ಸ್ಥಾನಗಳನ್ನು ಗೆದ್ದಿತ್ತು.