ಚೆನ್ನೈ(ತಮಿಳುನಾಡು): ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಮರೀನಾ ಬೀಚ್ನಲ್ಲಿಂದು ಏರ್ ಶೋ ನಡೆಯಿತು. ಆಕಾಶದಲ್ಲಿ ಬೆರಗುಗೊಳಿಸುವ ಸಾಹಸಗಳು ನೆರೆದವರನ್ನು ರೋಮಾಂಚನಗೊಳಿಸಿದವು. ಇನ್ನು ಈ ವೈಮಾನಿಕ ಪ್ರದರ್ಶನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದು, ಚೆನ್ನೈ ನಗರಕ್ಕೆ ಹಿರಿಮೆ ತಂದುಕೊಟ್ಟಿದೆ.
ಹೌದು, 15 ಲಕ್ಷಕ್ಕೂ ಹೆಚ್ಚು ಜನರು ಆಕಾಶದಲ್ಲಿ ಅದ್ಭುತ ಸಾಹಸಗಳನ್ನು ವೀಕ್ಷಿಸಿದರು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಜನ ವೀಕ್ಷಿಸಿದ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 21 ವರ್ಷಗಳ ನಂತರ ನಡೆದ ವೈಮಾನಿಕ ಪ್ರದರ್ಶನದ ಸಾಹಸಗಳನ್ನು ಕರಾವಳಿಯ ಕೋವಲಂನಿಂದ ಎನ್ನೂರ್ ವರೆಗೆ ಸೇರಿದ್ದ ಸಾರ್ವಜನಿಕರು ಕಣ್ತುಂಬಿಕೊಂಡರು.
ಅಣುಕು ರಕ್ಷಣಾ ಕಾರ್ಯಾಚರಣೆಯೊಂದಿಗೆ ಪ್ರಾರಂಭವಾದ ಏರ್ ಶೋ: ಐಎಎಫ್ನ ಗರುಡ ಕಮಾಂಡೋ ತಂಡವು ನಡೆಸಿದ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಯೊಂದಿಗೆ ಏರ್ ಶೋ ಪ್ರಾರಂಭವಾಯಿತು. ಸ್ಕ್ವಾಡ್ರನ್ ಲೀಡರ್ ಲಕ್ಷತಾ ನೇತೃತ್ವದ ಆಕಾಶ್ ಗಂಗಾ ತಂಡ ಎಎನ್ -32 ವಿಮಾನದಿಂದ ಪಾಥ್ ಫೈಂಡರ್ಗಳನ್ನು ಕೆಳಗಿಳಿಸಿತು.
ಆಕಾಶದಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಈ ಏರ್ ಶೋ ಭಾರತೀಯ ವಾಯುಪಡೆಯಲ್ಲಿ ಮಹಿಳಾ ಸಬಲೀಕರಣವನ್ನು ಹೆಮ್ಮೆಯಿಂದ ಪ್ರದರ್ಶಿಸಿತು ಮತ್ತು ಹಲವಾರು ಮಹಿಳಾ ಅಧಿಕಾರಿಗಳು ವಿಮಾನಗಳನ್ನು ಚಲಾಯಿಸಿ ಗಮನ ಸೆಳೆದರು.
- ಸ್ಕ್ವಾಡ್ರನ್ ಲೀಡರ್ಗಳಾದ ಭಾವನಾ ಕಾಂತ್ ಮತ್ತು ಅವನಿ ಚತುರ್ವೇದಿ ಅವರು ಸುಖೋಯ್ ಎಸ್ಯು -30 ಎಂಕೆಐ ಅನ್ನು ಚಲಾಯಿಸಿದರು.
- ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಹೆಚ್‌ಎಎಲ್ ತೇಜಸ್ ಯುದ್ಧ ವಿಮಾನ ಮುನ್ನಡೆಸಿದರು.
- ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ರಫೇಲ್ ಮತ್ತು ಇತರೆ ಮಹಿಳಾ ಅಧಿಕಾರಿಗಳು ಮಿಗ್ -29 ಅನ್ನು ಆಕಾಶದಲ್ಲಿ ಹಾರಿಸಿದರು.