ಮಧುರೈ (ತಮಿಳುನಾಡು) : ಜಾತಿ ಮತ್ತು ಧರ್ಮದ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದು ತಮಿಳರ ಏಕತೆಗೆ ಭಂಗ ತರುವ ಪ್ರಯತ್ನವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿವಂಗತ ತಂದೆ ಮತ್ತು ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಹೆಸರಿನ ಭವ್ಯವಾದ ರಂಗಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಎಂಕೆ ಸಂಸ್ಥಾಪಕ ಸಿ ಎನ್ ಅಣ್ಣಾದೊರೈ ಅವರಿಂದ ತಮಿಳುನಾಡಿಗೆ ಹೆಸರು ಬಂದಿದೆ ಮತ್ತು ಕರುಣಾನಿಧಿ ಅವರು ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕೊಡಿಸುವಲ್ಲಿ ವಿಶೇಷ ಆಸ್ತ್ಯ ವಹಿಸಿದರು ಎಂದು ಸ್ಟಾಲಿನ್ ನೆನಪಿಸಿಕೊಂಡರು. ತಮಿಳಿನ ಅಸ್ಮಿತೆ ಅಥವಾ ಹೆಗ್ಗುರುತಾದ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಮುಖ್ಯಮಂತ್ರಿ ಇದೇ ವೇಳೆ ಒತ್ತಿ ಹೇಳಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ರಾಜ್ಯದಲ್ಲಿ ಜಲ್ಲಿಕಟ್ಟು ನಡೆಸಲು ಅನುಮತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನಿಂದ ಅನುಕೂಲಕರ ತೀರ್ಪು ಬರುವ ಮೊದಲೇ ಕೇಂದ್ರ ಬಿಜೆಪಿಯು ರಂಗಭೂಮಿಯ ನಾಟಕವಾಡುತ್ತಿದೆ ಎಂದು ಆರೋಪಿಸಿದರು. ಅವರು 2014ರಲ್ಲಿ ಎದುರಿಸಿದ ಸವಾಲುಗಳನ್ನು ಮತ್ತು ನಂತರದ 2017 ರಲ್ಲಿ ಸಾರ್ವಜನಿಕ ಪ್ರತಿಭಟನೆಗಳ ಬಗೆಗೆ ಮಾತನಾಡಿದ ಸಿಎಂ ಸ್ಟಾಲಿನ್, ಎಐಎಡಿಎಂಕೆ ಸರ್ಕಾರವು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿತು ಎಂದು ಟೀಕಿಸಿದ್ದಾರೆ. ಪ್ರತಿಭಟನೆಗಳ ಹೊರತಾಗಿಯೂ, ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಯಾವುದೇ ಶಾಶ್ವತ ಪರಿಹಾರವನ್ನು ಕೊಡಲಾಗಲಿಲ್ಲ ಎಂದು ಅವರು ಇದೇ ವೇಳೆ ಆರೋಪಿಸಿದರು.