ಹೈದರಾಬಾದ್:ಹೈದರಾಬಾದ್ ಹೊರವಲಯದಲ್ಲಿರುವ ದೇವಸ್ಥಾನದ ಬಳಿ ಸೋಮವಾರ ಏಕಾಏಕಿ ಸಂಭವಿಸಿದ ಸ್ಫೋಟದಲ್ಲಿ ಅರ್ಚಕರೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿನ ಸೈಬರಾಬಾದ್ ಕಮಿಷನರೇಟ್‌ನ ಮೈಲಾರ್‌ದೇವಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಗುಡ ರಸ್ತೆಯಲ್ಲಿರುವ ಪ್ರಜಾಪ್ರತಿ ಶ್ರೀ ಶ್ರೀ ಯಾದೆ ಮಾತಾ ದೇವಸ್ಥಾನದ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ.
ಪೊಲೀಸರ ಪ್ರಕಾರ, ಅರ್ಚಕರು ದೇವಾಲಯದ ಹೊರಗೆ ಪಾದಚಾರಿ ಮಾರ್ಗದಲ್ಲಿ ಕಾಡು ಸಸ್ಯಗಳನ್ನು ತೆರವುಗೊಳಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಪೂಜಾರಿಯನ್ನು ಸುಗುಣರಾಮ್ ಎಂದು ಗುರುತಿಸಲಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾರ್ವಾಡಿ ಸಮಾಜಕ್ಕೆ ಸೇರಿದ ದೇವಸ್ಥಾನ ಇದಾಗಿದ್ದು, ಬೆಳಗ್ಗೆ 10.30 ರ ಸುಮಾರಿಗೆ ಸಂಭವಿಸಿದ ಸ್ಫೋಟವು ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ಸ್ಫೋಟದ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.
ಬಾಂಬ್ ಸ್ಫೋಟವಾದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವೂ ಸ್ಪಾಟ್ಗೆ ಆಗಮಿಸಿದೆ. ಯಾವುದೇ ಹೆಚ್ಚಿನ ಸ್ಫೋಟಕ ವಸ್ತುಗಳು ಸದ್ಯಕ್ಕೆ ಕಂಡು ಬಂದಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ. ಸ್ಫೋಟದ ಕಾರಣವನ್ನು ತಿಳಿಯಲು ವಿಧಿವಿಜ್ಞಾನ ತಂಡವೂ ತನಿಖೆ ನಡೆಸುತ್ತಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ತಂಡವನ್ನೂ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಹಾಯಕ ಪೊಲೀಸ್ ಆಯುಕ್ತ (ರಾಜೇಂದ್ರನಗರ) ಟಿ.ಶ್ರೀನಿವಾಸ್ ಮತ್ತು ಸ್ಥಳೀಯ ಕಾರ್ಪೊರೇಟರ್ ತೋಕಲ ಶ್ರೀನಿವಾಸ್ ರೆಡ್ಡಿ ಭೇಟಿ ನೀಡಿದರು. ಘಟನಾ ಸ್ಥಳದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಘಟನೆಯನ್ನು ಖಂಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:Inspirational Story: ಹಳೆ ವಸ್ತು ಬಳಸಿ 8ನೇ ಕ್ಲಾಸ್ ವಿದ್ಯಾರ್ಥಿಯಿಂದ 'ಸೂಪರ್ ಬೈಕ್' ತಯಾರಿ: ಖರ್ಚಾಗಿದ್ದು 17 ಸಾವಿರ!!