ಬಲಿಯಾ (ಉತ್ತರ ಪ್ರದೇಶ): ಶಾಲೆಯಿಂದ ಹಿಂತಿರುಗುತ್ತಿದ್ದ 11ನೇ ತರಗತಿಯ ವಿದ್ಯಾರ್ಥಿನಿಗೆ ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿ, ಆಕೆಯನ್ನು ತೀವ್ರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. ದೌರ್ಜನ್ಯವನ್ನು ವಿರೋಧಿಸಿದ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ ಕಾಲುವೆಗೆ ತಳ್ಳಿ, ತೀವ್ರವಾಗಿ ಥಳಿಸಲಾಗಿದೆ . ಕಿರುಚಾಟವನ್ನು ಕೇಳಿ ಸುತ್ತಮುತ್ತಲಿನ ಜನ ಆಗಮಿಸಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನು ಮೊದಲಿಗೆ ಖೇಜೂರಿ ಪ್ರಾಥಮಿಕ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ನಂತರ ವೈದ್ಯರ ಸಲಹೆಯ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕಡಿ ಪೊಲೀಸ್ ಠಾಣೆ ಪ್ರದೇಶದ ಜಗದಾರಾ ಚಟ್ಟಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.