ಕರ್ನಾಟಕ

karnataka

ETV Bharat / bharat

ಸನಾತನ ಧರ್ಮ ರಕ್ಷಣೆಗೆ ಜನಸೇನಾ ಪಕ್ಷದಲ್ಲಿ 'ನರಸಿಂಹ ವರಾಹಿ ಬ್ರಿಗೇಡ್' ರಚನೆ: ಪವನ್ ಕಲ್ಯಾಣ್ ಘೋಷಣೆ - PAWAN KALYAN

ಸನಾತದ ಧರ್ಮದ ಸಂರಕ್ಷಣೆಗಾಗಿಯೇ ಜನಸೇನಾ ಪಕ್ಷದಲ್ಲಿ 'ನರಸಿಂಹ ವರಾಹಿ ಬ್ರಿಗೇಡ್ ವಿಭಾಗ' ರಚಿಸುವುದಾಗಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶನಿವಾರ ಪ್ರಕಟಿಸಿದರು.

ಪವನ್ ಕಲ್ಯಾಣ್
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (ETV Bharat)

By ANI

Published : Nov 3, 2024, 10:35 AM IST

ಈಲೂರು(ಆಂಧ್ರ ಪ್ರದೇಶ): ಸನಾತನ ಧರ್ಮದ ರಕ್ಷಣೆಗಾಗಿ ಜನಸೇನಾ ಪಕ್ಷದಲ್ಲಿ 'ನರಸಿಂಹ ವರಾಹಿ ಬ್ರಿಗೇಡ್' ರಚಿಸುವುದಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

ಆಂಧ್ರ ಪ್ರದೇಶದ ಈಲೂರಿನ ಜಗನ್ನಾಥಪುರಂನಲ್ಲಿ ಶನಿವಾರ 'ದೀಪಂ-2' ಎಂಬ ಉಚಿತ ಅಡುಗೆ ಅನಿಲ ಯೋಜನೆಗೆ ಚಾಲನೆ ನೀಡಿ, ಅವರು ಈ ಘೋಷಣೆ ಮಾಡಿದರು.

"ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಆದರೆ ನನ್ನ ಧರ್ಮದಲ್ಲಿ ದೃಢವಾಗಿ ನಿಲ್ಲುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾರ್ವಜನಿಕವಾಗಿ ಸನಾತನ ಧರ್ಮದ ಬಗ್ಗೆ ಅಗೌರವದಿಂದ ಮಾತನಾಡುವವರು ಇನ್ನು ಮುಂದೆ ತಕ್ಕ ಪರಿಣಾಮ ಎದುರಿಸಲಿದ್ದಾರೆ. ಇದೇ ಕಾರಣಕ್ಕೆ ಸನಾತನ ಧರ್ಮದ ರಕ್ಷಣೆಗೆಂದೇ ನಾನು ನಮ್ಮ ಪಕ್ಷದಲ್ಲಿ 'ನರಸಿಂಹ ವರಾಹಿ ಬ್ರಿಗೇಡ್' ರಚಿಸುತ್ತಿದ್ದೇನೆ" ಎಂದು ಅವರು ನುಡಿದರು.

ಇದೇ ವೇಳೆ ರಾಜ್ಯದ ಸಮ್ಮಿಶ್ರ ಸರ್ಕಾರದ ಆದ್ಯತೆಗಳ ಕುರಿತು ಮಾತನಾಡುತ್ತಾ, "ನಮ್ಮ ಸರ್ಕಾರ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಮಹಿಳೆಯರಿಗೆ ಕಿರುಕುಳದ ಬೆದರಿಕೆ ಅಥವಾ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದರು.

"ಈ ಹಿಂದಿನ ಸರ್ಕಾರಕ್ಕಿಂತ ಅತ್ಯುನ್ನತ ದರ್ಜೆಯ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ನಾವು ಭರವಸೆ ನೀಡಿದಂತೆ ಅನುಷ್ಠಾನಗೊಳಿಸುತ್ತಿದ್ದೇವೆ. ದೀಪಂ 2 ಯೋಜನೆಯ ಮೂಲಕ 3 ಗ್ಯಾಸ್ ಸಿಲಿಂಡರ್‌ಗಳನ್ನು ಪ್ರತಿ ವರ್ಷ ರಾಜ್ಯದ 1,08,39,286 ಅರ್ಹ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ. ಇದಕ್ಕೆ ವರ್ಷಕ್ಕೆ 2,684 ರೂ ಖರ್ಚಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಇದಕ್ಕಾಗಿ ಸರ್ಕಾರ 13,425 ರೂ ವೆಚ್ಚ ಮಾಡಲಿದೆ" ಎಂದು ಮಾಹಿತಿ ನೀಡಿದರು.

ವೈಎಸ್‌ಆರ್‌ಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್, "ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಪಿ ಪಕ್ಷ 11 ಸೀಟುಗಳನ್ನು ಪಡೆದರೂ ಅದರ ಸದಸ್ಯರು, ಬೆಂಬಲಿಗರಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿದೆಯಷ್ಟೇ. ಅಷ್ಟರಲ್ಲೇ ರಾಜ್ಯದಲ್ಲಿ ದುರಂತವೇ ಸಂಭವಿಸಿತೇನೋ ಎಂಬಂತೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. ಇನ್ನು ಮುಂದೆ ಸರ್ಕಾರದ ವಿರುದ್ಧ ಈ ರೀತಿ ಸುಳ್ಳು ಮಾಹಿತಿ ಹರಡುವುದನ್ನು ಸಹಿಸಲಾಗದು" ಎಂದು ತಿಳಿಸಿದರು.

"ವೈಎಸ್‌ಆರ್‌ಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಅವಹೇಳನ ಮುಂದುವರೆಸಿದ್ದಾರೆ. ನಾವು ಮಹಿಳೆಯರ ವಿರುದ್ಧದ ಯಾವುದೇ ರೀತಿಯ ಅವಹೇಳನವನ್ನೂ ನಿರ್ಲಕ್ಷಿಸುವುದಿಲ್ಲ. ಇಂಥ ಕೆಲಸದಲ್ಲಿ ನಿರತರಾಗಿರುವ ಸಾಮಾಜಿಕ ಜಾಲತಾಣ ಖಾತೆಗಳನ್ನು ಗಮನಿಸುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಭ್ರಷ್ಟಾಚಾರ, ಕೋಮು ಶಕ್ತಿಗಳೇ ನಮ್ಮ ಪಕ್ಷದ ಪ್ರಮುಖ ಶತ್ರುಗಳು: ವಿಜಯ್​ ದಳಪತಿ

ABOUT THE AUTHOR

...view details