ಅಮರಾವತಿ (ಆಂಧ್ರಪ್ರದೇಶ):ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಹಾಲಿ ಶಾಸಕರೊಬ್ಬರು ಮಾರ್ಚ್ 13 ರಂದು ನಡೆದ ಚುನಾವಣೆಯ ವೇಳೆ 7 ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಈ ಕೃತ್ಯ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಗೆ ಅಡ್ಡಿ ಮತ್ತು ಕಾನೂನು ಮೀರಿದ ಆರೋಪದ ಮೇಲೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗ ಹೇಳಿದೆ.
ಮತಯಂತ್ರ ನೆಲಕ್ಕೆ ಕುಕ್ಕಿದ ಶಾಸಕ:ಮಾಚರ್ಲಾ ಕ್ಷೇತ್ರದ ಹಾಲಿ ಮತ್ತು ಮೂರು ಬಾರಿ ಶಾಸಕರಾಗಿರುವ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ರೆಂಟಚಿಂತಲ ಮಂಡಲದ ಪಲ್ವೊಯ್ಗೇಟ್ ಮತಗಟ್ಟೆ ಕೇಂದ್ರದ ಬೂತ್ 202 ರಲ್ಲಿ ನೇರವಾಗಿ ಬಂದು ವಿವಿ-ಪ್ಯಾಟ್ ಯಂತ್ರವನ್ನು ಎತ್ತಿ ನೆಲಕ್ಕೆ ಕುಕ್ಕಿ ಛಿದ್ರ ಮಾಡಿದ್ದಾರೆ. ಪೊಲೀಸರು ಮತ್ತು ಬೂತ್ ಚುನಾವಣಾಧಿಕಾರಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ರಾಮಕೃಷ್ಣ ರೆಡ್ಡಿ ಹೀಗೆ 7 ಮತಗಟ್ಟೆ ಕೇಂದ್ರಗಳಿಗೆ ತೆರಳಿ ಇವಿಎಂಗಳನ್ನು ಧ್ವಂಸಗೊಳಿಸಿದ್ದಾರೆ. ಅವರ ಈ ಎಲ್ಲಾ ಕೃತ್ಯಗಳು ಬೂತ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದೆ. ಶಾಸಕರ ದುಷ್ಕೃತ್ಯವನ್ನು ತಡೆಯಲು ಮತಕೇಂದ್ರಕ್ಕೆ ಭದ್ರತೆ ನೀಡಬೇಕಿದ್ದ ಪೊಲೀಸ್ ಸಿಬ್ಬಂದಿ ವಿಫಲವಾಗಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ಆಯೋಗ ತಾಕೀತು ಮಾಡಿದೆ. ಶಾಸಕರ ಈ ಬೂಟಾಟಿಕೆಯ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿದ್ದು, ರೆಡ್ಡಿ ಅವರು ತಪ್ಪು ಎಸಗಿರುವುದು ಸಾಬೀತಾಗಿದೆ. ವೈಎಸ್‌ಆರ್‌ಸಿಪಿ ಶಾಸಕನ ಈ ದುರ್ನಡತೆಗೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.