ಮುಂಬೈ (ಮಹಾರಾಷ್ಟ್ರ): ನಟಿ ಹಾಗೂ ರಾಜಕಾರಣಿಯಾಗಿರುವ ಸ್ವತಂತ್ರ ಸಂಸದೆ ನವನೀತ್ ರಾಣಾ ಅವರು ಬುಧವಾರ ರಾತ್ರಿ ನಾಗ್ಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸ್ವತಂತ್ರ ಸಂಸದೆಯಾಗಿದ್ದ ನವನೀತ್ ಅವರ ಈ ಹಠಾತ್ ನಡೆ ರಾಜಕೀಯ ವಲಯದಲ್ಲಿ ಹಲವರ ಹುಬ್ಬು ಗಂಟಿಕ್ಕುವಂತೆ ಮಾಡಿದೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಣಾ ಅವರ ಗೆಲುವಿನ ವಿಶ್ವಾಸ ದುಪ್ಪಟ್ಟಾಗಿದೆ.
ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ನವನೀತ್, "ಕಳೆದ ಐದು ವರ್ಷಗಳಿಂದ ನಾನು ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಮತ್ತು ನನ್ನ ಸಿದ್ಧಾಂತವೂ ಅವುಗಳಿಂದ ಹೊರತಾಗಿರಲಿಲ್ಲ. ನನ್ನ ಪತಿ ಶಾಸಕ ರವಿ ರಾಣಾ ಅವರು ಕೂಡಾ ಮಹಾರಾಷ್ಟ್ರದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ ಅವರು ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ಬೆಂಬಲಿಸುತ್ತಾರೆ. ಹಾಗಾಗಿ ನನಗೆ ಟಿಕೆಟ್ ಕೊಟ್ಟರು. ಬಿಜೆಪಿ ನನ್ನ ಶ್ರಮವನ್ನು ಗೌರವಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ 400 ಸ್ಥಾನಗಳನ್ನು ದಾಟುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತೇವೆ. ಬಿಜೆಪಿಗೆ ಸಮರ್ಥ ಕಾರ್ಯಕರ್ತೆಯಾಗಿ ದುಡಿಯುತ್ತೇನೆ" ಎಂದು ಹೇಳಿದರು.
ನವನೀತ್ ರಾಣಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಅಮರಾವತಿಯಿಂದ ಶಿವಸೇನಾ ಅಭ್ಯರ್ಥಿ ಮತ್ತು ಮಾಜಿ ಕೇಂದ್ರ ಸಚಿವ ಆನಂದ ರಾವ್ ಅಡ್ಸುಲ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.
ಮಹಾರಾಷ್ಟ್ರದ ಆಡಳಿತ ಪಕ್ಷದ ಕೆಲವು ಮಿತ್ರಪಕ್ಷಗಳು, ಸಂಸದೆ ನವನೀತ್ ರಾಣಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಹಾಗೂ ಅವರನ್ನು ಅಮರಾವತಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಿಜೆಪಿ ಯೋಜನೆ ವಿರುದ್ಧ ಧ್ವನಿ ಎತ್ತಿವೆ. ಇದು 'ರಾಜಕೀಯ ಆತ್ಮಹತ್ಯೆ' ಹಾಗೂ 'ಪ್ರಜಾಪ್ರಭುತ್ವದ ಅವನತಿ' ಎಂದು ಟೀಕಿಸಿವೆ. ಪ್ರತಿಪಕ್ಷ ಕಾಂಗ್ರೆಸ್ ಮಾತ್ರವಲ್ಲದೇ, ಆಡಳಿತ ಪಕ್ಷದ ಮಿತ್ರಪಕ್ಷ, ಸ್ವತಂತ್ರ ಶಾಸಕ ಬಚ್ಚು ಕಾಡು ಮತ್ತು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಸದಸ್ಯ ಮಾಜಿ ಸಂಸದ ಆನಂದರಾವ್ ಅಡ್ಸುಲ್ ಕೂಡ ಬಿಜೆಪಿಯ ಈ ಹೆಜ್ಜೆಯನ್ನು ಟೀಕಿಸಿದ್ದಾರೆ.