ಸುಕ್ಮಾ(ಛತ್ತೀಸ್‌ಗಢ): ನಕ್ಸಲರು ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನದ (ಐಇಡಿ) ಮೇಲೆ ಆಕಸ್ಮಿಕವಾಗಿ ಕಾಲಿಟ್ಟು ಸಂಭವಿಸಿದ ಸ್ಫೋಟದಲ್ಲಿ 10 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಛತ್ತೀಸ್ಗಢದ ಸುಕ್ಮಾದಲ್ಲಿ ಭಾನುವಾರ ಸಂಜೆ ನಡೆಯಿತು.
ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಪುರಂ ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ಸಂಜೆ ಆಟ ಆಡುತ್ತಿದ್ದ ಬಾಲಕಿ ಐಇಡಿ ಮೇಲೆ ಕಾಲಿರಿಸಿದ್ದಾಳೆ. ತಕ್ಷಣ ಅದು ಸ್ಫೋಟಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಸ್ಪೋಟದ ಸದ್ದು ಕೇಳಿ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ನೆರೆಹೊರೆಯವರ ಸಹಾಯದಿಂದ ಆಕೆಯನ್ನು ಹತ್ತಿರದಲ್ಲಿದ್ದ ಪುಲಂಪಡ್ನಲ್ಲಿನ ಸಿಆರ್ಪಿಎಫ್ ಕೇಂದ್ರಕ್ಕೆ ತರಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಸುಕ್ಮಾ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಸುಕ್ಮಾ ಎಸ್ಪಿ ಕಿರಣ್ ಛಾವಣ್ ಮಾಹಿತಿ ನೀಡಿದ್ದಾರೆ.
ಸ್ಪೋಟದ ಬಳಿಕ ಪೊಲೀಸರು ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಸಮೀಪದ ಪ್ರದೇಶದಲ್ಲೂ ಬಾಂಬ್ ಅಡಗಿಸಿಟ್ಟಿರುವ ಕುರಿತು ಶೋಧ ನಡೆಸಿದ್ದಾರೆ. ಬಸ್ತಾರ್‌ನಲ್ಲಿ ಯೋಧರಿಗೆ ಹಾನಿ ಮಾಡಲು ನಕ್ಸಲರು ಐಇಡಿಯನ್ನು ದೊಡ್ಡ ಶಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ. ನಕ್ಸಲರು ರಸ್ತೆ ಮಾರ್ಗ ಮತ್ತು ಫುಟ್ಪಾತ್ನಲ್ಲಿ ಅಡಗಿಸಿಟ್ಟ ಐಇಡಿಗೆ ಯೋಧರು ಮತ್ತು ಗ್ರಾಮಸ್ಥರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.