ರೇವಾ (ಮಧ್ಯಪ್ರದೇಶ): ನಿರ್ಮಾಣ ಹಂತದ ಬೃಹತ್ ಗಾತ್ರದ ಹೈಟೆನ್ಷನ್ ವಿದ್ಯುತ್ ಪ್ರಸರಣ ಟವರ್ (Power Transmission) ಹಠಾತ್ ತುಂಡಾಗಿ ಬಿದ್ದ ಪರಿಣಾಮ ಅದರ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆ ಸಿಧಿ ಸಮೀಪದ ರಾಂಪುರ ನಾಯ್ಕಿನ್ ಪೊಲೀಸ್ ಠಾಣೆ ವ್ಯಾಪ್ತಿಯ ಆಮ್ದಾ ಗ್ರಾಮದಲ್ಲಿ ನಡೆದಿದೆ. ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರೆಲ್ಲರೂ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. 132ಕೆವಿ ಹೈಟೆನ್ಷನ್ ಟವರ್ ನಿಲ್ಲಿಸಲಾಗುತ್ತಿದ್ದು, ಈ ವೇಳೆ ಟವರ್ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸಿದೆ. ಟವರ್ ಕುಸಿದಾಗ ಸುಮಾರು ಒಂಬತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಂಬ್ಯುಲೆನ್ಸ್‌ನಲ್ಲಿ ರೇವಾಗೆ ತೆರಳುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ತರಾತುರಿಯಲ್ಲಿ ಗ್ರಾಮಸ್ಥರು ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ರಾಂಪುರ ನಾಯ್ಕಿನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿದ್ದು, ಅಲ್ಲಿಂದ ಎಲ್ಲ ಗಾಯಾಳುಗಳನ್ನು ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಂಡಾಗಿ ಬಿದ್ದ ಬೃಹತ್ ಗಾತ್ರದ ಹೈಟೆನ್ಷನ್ ವಿದ್ಯುತ್ ಪ್ರಸರಣ ಟವರ್ (ETV Bharat) "ಗುರುವಾರ ಮಧ್ಯಾಹ್ನ 12:30ಕ್ಕೆ ಈ ಅವಘಡ ಸಂಭವಿಸಿದ್ದು, ಎಲ್ಲ ಕಾರ್ಮಿಕರು ಸುಮಾರು 70 ಅಡಿ ಎತ್ತರದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಟವರ್ ಮಧ್ಯದಿಂದ ತುಂಡಾಗಿ ಮುರಿದುಬಿದ್ದಿದೆ. ಪರಿಣಾಮ ಅದರ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ಎಲ್ಲ ಕಾರ್ಮಿಕರು ನೆಲಕ್ಕೆ ಅಪ್ಪಳಿಸಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಖಾಸಗಿ ಕಂಪನಿಯೊಂದು ಟ್ರಾನ್ಸ್‌ಮಿಷನ್ ಟವರ್ ಕಾಮಗಾರಿ ನಡೆಸುತ್ತಿತ್ತು" ಎಂದು ಸಿಧಿ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ಮಾಹಿತಿ ನೀಡಿದ್ದಾರೆ.
ಮೃತ ನಾಲ್ವರಲ್ಲಿ ಎಸ್ ಕೆ ಮುಬಾರತ್ ಮತ್ತು ಅಜ್ಮೀರ್ ಶೇಖ್ ಎಂಬ ಇಬ್ಬರ ಹೆಸರು ಗೊತ್ತಾಗಿದ್ದು, ಇನ್ನಿಬ್ಬರ ಹೆಸರು ತಿಳಿದು ಬರಬೇಕಿದೆ. ಎಸ್‌ಕೆ ಸಾಹೇಬ್, ಸಿಂಟು ಮೊಬಿನ್, ಎಮರಾಲ್ ಶೇಖ್, ಎಸ್‌ಕೆ ದಿಲ್ದಾರ್, ಎಸ್‌ಕೆ ದಿಲ್ಬರ್, ಎಸ್‌ಕೆ ಮಾಫಾನ್ ಮತ್ತು ಎಸ್‌ಕೆ ಹಮೀದುಲ್ ಎಂಬುವರು ಗಾಯಗೊಂಡಿದ್ದಾರೆ. ಇವರೆಲ್ಲರೂ ಪಶ್ಚಿಮ ಬಂಗಾಳದಿಂದ ಬಂದು ಮಧ್ಯಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು.
"ಘಟನೆಗೆ ಕಾರಣ ತಿಳಿದು ಬಂದಿಲ್ಲ. ಏಕಾಯ್ತು? ಹೇಗಾಯ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಕಾರಣ ತಿಳಿದು ಬರಲಿದೆ" ಎಂದು ರಾಂಪುರ ನಾಯ್ಕಿನ್ ಪೊಲೀಸ್ ಠಾಣೆಯ ಪ್ರಭಾರಿ ಸುಧಾಂಶು ತಿವಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ನಿರ್ಮಾಣ ಹಂತದ ಏಳನೇ ಅಂತಸ್ತಿನ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು: ಮತ್ತೋರ್ವನಿಗೆ ಗಂಭೀರ ಗಾಯ - WORKER DIES FALLING FROM BUILDING