ದಸರಾ ಮಹೋತ್ಸವ: ದೀಪಾಲಂಕಾರದಿಂದ ಝಗಮಗಿಸುತ್ತಿದೆ ಚಾಮರಾಜನಗರ - ಚಾಮರಾಜನಗರ ದಸರಾ
ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರದ ವಿವಿಧ ರಸ್ತೆಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಸೆಪ್ಟೆಂಬರ್ 27ರಿಂದ 30ರವರೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಮುಖ್ಯ ವೇದಿಕೆಯಲ್ಲಿ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 27ರಂದು 7ರಿಂದ 8ರವರೆಗೆ ಡಾ. ಮಳವಳ್ಳಿ ಮಹದೇವಸ್ವಾಮಿ, ಡಾ. ಅಪ್ಪಗೆರೆ ತಿಮ್ಮರಾಜು, ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡದವರಿಂದ ಮಾಯಾದಂತ ಮಳೆ ಬಂತಣ್ಣ ಜಾನಪದ ಗೀತೆ ವೈಭವ ನಡೆಯಲಿದೆ. ಸೆಪ್ಟೆಂಬರ್ 28ರಂದು ಸರಿಗಮಪ ಕಲಾವಿದರಾದ ಆರ್. ಮಹೇಂದ್ರ, ರವಿಕುಮಾರ್ ತಂಡದಿಂದ ಭಾವಯಾನ ಸುಗಮ ಸಂಗೀತ, 7.30ರಿಂದ 8.30ರವರೆಗೆ ಕೃಷ್ಣೇಗೌಡ ಮತ್ತು ತಂಡದವರಿಂದ ನಗೆ ಹಬ್ಬ ಹಾಸ್ಯಸಂಜೆ, ಸೆ. 29ರಂದು ಕಾಮಿಡಿ ಕಿಲಾಡಿಗಳು, ಸೆ. 30ರಂದು ಅನುರಾಧ ಭಟ್, ಶ್ರೀಹರ್ಷ, ಅಶ್ವಿನ್‍ಶರ್ಮಾ, ಅಂಕಿತಕುಂಡು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ, ಡಾ.ರಾಜ್ ಕುಮಾರ್ ರಂಗಮಂದಿರ, ಜೆ.ಎಚ್.ಪಟೇಲ್ ಸಭಾಂಗಣದಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.