ಶಾಸಕ ಸಿ ಟಿ ರವಿ ಹುಟ್ಟೂರಲ್ಲಿ ಭೂಕುಸಿತ.. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಕಂದಕ
ಚಿಕ್ಕಮಗಳೂರು : ಜಿಲ್ಲೆಯಾದ್ಯಂತ ವರುಣಾರ್ಭಟ ಕಡಿಮೆಯಾಗಿದ್ದರೂ ಅನಾಹುತಗಳು ಮಾತ್ರ ಮುಂದುವರಿದಿದೆ. ಶಾಸಕ ಸಿ ಟಿ ರವಿ ಅವರ ತವರು ಗ್ರಾಮವಾದ ಚಿಕ್ಕಮಾಗರವಳ್ಳಿಯಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಲೋಕೇಶ್ ಗೌಡ ಎಂಬುವವರಿಗೆ ಸೇರಿದ ಸುಮಾರು ಒಂದು ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಭೂ ಕುಸಿತದಿಂದ ಸುಮಾರು 30 ಅಡಿಯಷ್ಟು ಕಂದಕ ನಿರ್ಮಾಣವಾಗಿದೆ. ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ ಉಪಯುಕ್ತ ಮರಗಳು, ಅದಕ್ಕೆ ಹಬ್ಬಿದ್ದ ಮೆಣಸಿನ ಬಳ್ಳಿಗಳು, ಸಾವಿರಾರು ಕಾಫಿ ಗಿಡಗಳ ಸಮೇತ ಇಡೀ ತೋಟವೇ ಕಳಚಿ ಬಿದ್ದಿದೆ. ಭೂ ಕುಸಿತದಿಂದ ವಾಸದ ಮನೆಯ ಕುಸಿಯುವ ಭೀತಿ ಉಂಟಾಗಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.