ಕೇಂದ್ರ ಸರ್ಕಾರದ ಬಳಿ ಜಿಎಸ್ಟಿ ಪಾಲು ಕೇಳಲು ರಾಜ್ಯ ಸರ್ಕಾರ ಭಯಪಡುತ್ತಿದೆ; ಶ್ರೀನಿವಾಸ್ ಮಾನೆ
ಹಾನಗಲ್: ಕೇಂದ್ರ ಸರ್ಕಾರದ ಹತ್ತಿರ ಜಿಎಸ್ಟಿ ಹಣ ಕೇಳಲು ರಾಜ್ಯ ಸರ್ಕಾರ ಭಯಪಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಹೇಳಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹವಾದ ಜಿಎಸ್ಟಿ ಹಣ ನೀಡದೆ ಇರುವುದು ವಿಪರ್ಯಾಸ. ರಾಜ್ಯದಿಂದ ಅತೀ ಹೆಚ್ಚು ಸಂಸದರನ್ನು ನಮ್ಮ ಜನತೆ ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ತುಂಬಾ ನೋವನ್ನುಂಟು ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ವಿಪಕ್ಷ ನಾಯಕ ಸಿದ್ದರಾಮಯ್ಯನವರೊಂದಿಗೆ ಸರ್ವಪಕ್ಷದ ನಿಯೋಗವನ್ನು ಕರೆದುಕೊಂಡು ದೆಹಲಿಗೆ ಹೋಗಬೇಕು ಎಂದು ತಿಳಿಸಿದರು. ಪದೇ ಪದೇ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸುತ್ತಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ರಾಜ್ಯಕ್ಕೆ ಪರಿಹಾರ ನೀಡಲು ಹಿಂದೇಟು ಹಾಕಿತ್ತು. ಈ ಬಾರಿ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ರಾಜ್ಯ ಸಂಕಷ್ಟದಲ್ಲಿದೆ. ಕೂಡಲೇ ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆ ಪಾಲನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.