ಉತ್ತರ ಕನ್ನಡ ಜಿಲ್ಲೆಯ ಜನರ ಮೇಲೆ ವರುಣನ ಮುನಿಸು; ನೆರೆಗೆ ನಲುಗಿದ ಜನತೆ
ವರುಣಾಘಾತಕ್ಕೆ ಕರುನಾಡು ತತ್ತರಿಸಿದೆ. ಉತ್ತರ ಕನ್ನಡದಲ್ಲಿ ಮಳೆ ಬೆನ್ನಲ್ಲೇ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಜೀವನಕ್ಕೆ ತೊಂದರೆಯಾಗಿದೆ. ಪ್ರವಾಹದಿಂದ 108 ಗ್ರಾಮಗಳಿಗೆ ಹಾನಿಯಾಗಿದ್ದು, 15,077 ಜನರು ನೆರೆಯಿಂದ ಬಾಧಿತರಾಗಿದ್ದಾರೆ. ಮನೆ-ಮಠ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಳಿ, ಗಂಗಾವಳಿ, ಅಘನಾಶಿ ನದಿಗಳು ತುಂಬಿ ಹರಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವತ್ತ ಗಮನ ಹರಿಸಿದೆ. ಆದ್ರೆ ಪ್ರವಾಹಕ್ಕೆ ತುತ್ತಾಗಿ ನಾಲ್ವರು ಕೊನೆಯುಸಿರೆಳೆದಿದ್ದು, ಮೂವರು ಕಣ್ಮರೆಯಾಗಿದ್ದಾರೆ. 50 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 146 ಮನೆಗಳಿಗೆ ಭಾಗಶಃ ಹಾನಿಯಾಗಿವೆ. 94 ಕಾಳಜಿ ಕೇಂದ್ರಗಳಲ್ಲಿ 9,655 ಮಂದಿಗೆ ಆಶ್ರಯ ನೀಡಲಾಗಿದೆ. 28 ಸೇತುವೆ, ಕಾಲುಸಂಕಗಳಿಗೆ ಹಾನಿಯಾಗಿದ್ದು, 148.2 ಕಿಲೋ ಮೀಟರ್ ರಸ್ತೆಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. ಗುಳ್ಳಾಪುರ-ಹಳವಳ್ಳಿ ಸೇತುವೆ ಕೊಚ್ಚಿ ಹೋಗಿ ದ್ವೀಪದಂತಾದ ಗ್ರಾಮಗಳ ಜನರ ತುರ್ತು ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ವಿಶೇಷ ಯಾಂತ್ರೀಕೃತ ಬೋಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕಲ್ಪಿಸಿದ್ದಾರೆ.
Last Updated : Jul 25, 2021, 10:57 PM IST