ಡ್ರಗ್ಸ್ ಪ್ರಕರಣದಲ್ಲಿ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುತ್ತದೆ: ಶ್ರೀರಾಮುಲು
ಬೆಂಗಳೂರು: ಡ್ರಗ್ಸ್ ಪ್ರಕರಣದಿಂದ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದ ಮೆಟ್ರೋ ನಿಲ್ದಾಣಕ್ಕೆ ಇಂದು ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ನಮ್ಮ ಸರ್ಕಾರ ಬುಡ ಸಮೇತ ಕಿತ್ತುಹಾಕಲು ನಿರ್ಧಾರ ತೆಗೆದುಕೊಂಡಿದೆ. ರಾಜಕೀಯ ರಂಗ, ರಾಜಕಾರಣಿಗಳ ಮಕ್ಕಳು, ಚಿತ್ರ ನಟರು ಯಾರೇ ಈ ಡ್ರಗ್ಸ್ ಮಾಫಿಯಾದಲ್ಲಿರಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರೇ ಇದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಡ್ರಗ್ಸ್ ಮಾಫಿಯಾದಿಂದ ಯುವ ಜನತೆ, ಮುಂದಿನ ಯುವ ಪೀಳಿಗೆಯನ್ನು ಕಾಪಾಡಬೇಕಿದೆ. ನಮ್ಮ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದರು.