ಜಮ್ಮು: ಐವರು ಹುತಾತ್ಮ ಸೇನಾನಿಗಳಿಗೆ ಭಾವಪೂರ್ಣ ಗೌರವ- ವಿಡಿಯೋ
Published : Nov 24, 2023, 10:57 AM IST
ರಜೌರಿ/ಜಮ್ಮು:ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಇತ್ತೀಚೆಗೆ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಐವರು ಯೋಧರಿಗೆ ಇಂದು ಬೆಳಿಗ್ಗೆ ಸೇನೆ ಮತ್ತು ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು. ಬುಧವಾರ ಮತ್ತು ಗುರುವಾರ ದಾರಂಸಾಲ್‌ನ ಬಾಜಿಮಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ 36 ಗಂಟೆಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಈ ವೇಳೆ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ ಸೇನಾ ಸಿಬ್ಬಂದಿಗೆ ಆರ್ಮಿ ಜನರಲ್ ಹಾಸ್ಪಿಟಲ್ ಮತ್ತು ಸೇನೆಯು ಪುಷ್ಪಾರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ 'ಜನರಲ್ ಆಫೀಸರ್ ಕಮಾಂಡಿಂಗ್ ರೋಮಿಯೋ ಫೋರ್ಸ್' ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಪುಷ್ಪಗುಚ್ಛಗಳನ್ನಿಡುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಪೂಂಚ್ ನಿವಾಸಿ ಹಾವ್ ಅಬ್ದುಲ್ ಮಜೀದ್ ಅವರ ಪುಷ್ಪಾರ್ಚನೆ ಕಾರ್ಯಕ್ರಮ ಪೂಂಚ್‌ನಲ್ಲಿ ನೆರವೇರಿತು.
ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಪ್ರಾಣತ್ಯಾಗ ಮಾಡಿದ ಕರ್ನಾಟಕದ ಮಂಗಳೂರಿನ ನಿವಾಸಿ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ , ಉತ್ತರ ಪ್ರದೇಶದ ಆಗ್ರಾ ನಿವಾಸಿ ಕ್ಯಾಪ್ಟನ್ ಶುಭಂ ಗುಪ್ತಾ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಿವಾಸಿ ಹವಾಲ್ದಾರ್ ಅಬ್ದುಲ್ ಮಜೀದ್, ಉತ್ತರಾಖಂಡ್‌ನ ನೈನಿತಾಲ್ನಿಂದ ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ಟ್ ಮತ್ತು ಉತ್ತರ ಪ್ರದೇಶದ ಅಲಿಗಢದಿಂದ ಪ್ಯಾರಾಟ್ರೂಪರ್ ಸಚಿನ್ ಲಾರ್ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇದನ್ನೂ ಓದಿ:ಪೊಲೀಸ್ ಹುತಾತ್ಮರ ದಿನಾಚರಣೆ: ಗೌರವ ಸಲ್ಲಿಕೆ ವೇಳೆ ಕಣ್ಣೀರು ಹಾಕಿದ ಮೃತ ಪೊಲೀಸ್ ತಾಯಿ