Free bus: ಮಣ್ಣೆತ್ತಿನ ಅಮಾವಾಸ್ಯೆ: ಧಾರ್ಮಿಕ ಕ್ಷೇತ್ರಗಳಿಗೆ ತೆರಳಲು ಸರ್ಕಾರಿ ಬಸ್ಗೆ ಮುಗಿಬಿದ್ದ ಮಹಿಳೆಯರು
ರಾಯಚೂರು:ಇಂದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ತೆರಳಲು ಸರ್ಕಾರಿ ಬಸ್‌ಗಳಿಗೆ ಮುಗಿ ಬೀಳುತ್ತಿರುವ ದೃಶ್ಯಗಳು ರಾಯಚೂರು ಜಿಲ್ಲೆಯಲ್ಲಿ ಕಂಡು ಬಂದಿವೆ.
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಈ ದೃಶ್ಯ ಕಂಡು ಬಂದಿದೆ. ಅಮಾವಾಸ್ಯೆ ಪ್ರಯುಕ್ತವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಸರ್ಕಾರಿ ಬಸ್ ಮೂಲಕ ತೆರಳುತ್ತಿದ್ದಾರೆ. ಗುರುಗುಂಟಾ ಹತ್ತಿರದ ಸುಕ್ಷೇತ್ರ ಅಮರೇಶ್ವರ ಸ್ವಾಮಿ, ತಿಂಥಿಣಿ ಮೌನೇಶ್ವರ ಸ್ವಾಮಿ, ಬಾದಾಮಿ ಬನಶಂಕರಿ, ಕಲಾಮಲ ಕರಿಯಪ್ಪ ಸ್ವಾಮಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವುದಕ್ಕೆ ಬಸ್ಗೆ ಹತ್ತಲು ನಾ ಮುಂದು, ತಾ ಮುಂದು ಎಂದು ಮಹಿಳೆಯರು ಬರುತ್ತಿರುವುದರಿಂದ ಬಸ್‌ಗಳು ಭರ್ತಿಯಾಗುತ್ತಿವೆ.
ಅಲ್ಲದೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆಯ ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಬಸ್‌ಗಳು ಅಮರೇಶ್ವರ ದೇವಸ್ಥಾನಕ್ಕೆ ತೆರಳಲು ಭಕ್ತರ ಅನುಕೂಲಕ್ಕಾಗಿ ಐದಾರು ಟ್ರಿಪ್ ಸಂಚರಿಸುತ್ತಿದ್ದವು. ಆದರೆ ಈಗ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಪರಿಣಾಮ ಬೆಳಗ್ಗೆ ಮಧ್ಯಾಹ್ನದ ಅವಧಿಯಲ್ಲಿ 10ಕ್ಕೂ ಹೆಚ್ಚು ಟ್ರಿಪ್‌ಗಳಾಗಿ ಬಸ್‌ಗಳು ಸಂಚರಿಸಿದರೂ, ಎಲ್ಲವೂ ತುಂಬಿ ತುಳುಕುತ್ತಿವೆ.
ಇದನ್ನೂ ಓದಿ: ಮಣ್ಣೆತ್ತಿನ ಅಮಾವಾಸ್ಯೆ- ಮಾದಪ್ಪನ ಬೆಟ್ಟದಲ್ಲಿ ನಾರಿಯರ ದಂಡು: ವಿಡಿಯೋ