Watch video: ಎರಡು ಬೈಕ್‌ಗಳ ನಡುವೆ ಭೀಕರ ರಸ್ತೆ ಅಪಘಾತ; ಬೈಕ್ ಸವಾರರು ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಈಟಿವಿ ಭಾರತ್ ಕನ್ನಡ ನ್ಯೂಸ್
ತುಮಕೂರು :ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿರುವ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಜುಲೈ 7ರಂದು ಮಧ್ಯಾಹ್ನ 12.50 ಸಮಯದಲ್ಲಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಎರಡು ಬೈಕ್‌ಗಳ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಸವಾರ ಏಕಾಏಕಿ ಬೈಕ್ ಚಲಾಯಿಸಿ ಮುಂದೆ ಸಾಗಲು ಯತ್ನಿಸುತ್ತಿದ್ದಂತೆ ಕ್ಷಣಾರ್ಧದಲ್ಲಿಯೇ ಮತ್ತೊಂದು ಬೈಕ್ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಸುಮಾರು 10 ಮೀಟರ್ ದೂರದವರೆಗೂ ಹೋಗಿ ಬಿದ್ದಿದ್ದಾನೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ. ಈ ಕುರಿತು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಜುಲೈ 10 ರಂದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಮೇಲಿಂದ ನಿಯಂತ್ರಣ ತಪ್ಪಿ ಬೈಕ್ವೊಂದು ನದಿಗೆ ಬಿದ್ದಿದ್ದು, ಅವರಾದಿ ಗ್ರಾಮದ ಚನ್ನಪ್ಪ ಹರಿಜನ(30), ದುರ್ಗವ್ವ ಹರಿಜನ(25) ಕೊಚ್ಚಿಹೋದ ಸಂಬಂಧಿಗಳು ಎಂದು ಗುರುತಿಸಲಾಗಿದೆ. ಬ್ರಿಡ್ಜ್ ಬಳಿ ಬೈಕ್ ಪತ್ತೆಯಾಗಿದ್ದು, ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ :Watch video: ಬಸ್ ಮತ್ತು ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಒಬ್ಬನ ಸಾವು, 27 ಮಂದಿಗೆ ಗಾಯ