ಸ್ಪೀಕರ್ ಕಾಗೇರಿಗೂ ತಟ್ಟಿದ ಕಳಪೆ ಕಾಮಗಾರಿ ಬಿಸಿ: ಶಂಕುಸ್ಥಾಪನೆ ಮಾಡದೆ ವಾಪಸ್
ಕಾರವಾರ(ಉತ್ತರ ಕನ್ನಡ): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಹುತೇಕ ಶಾಸಕರುಗಳು ಅಳಿದುಳಿದ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಅಭಿವೃದ್ಧಿ ಹೆಸರಲ್ಲಿ ಮತ ಕೇಳಲು ಸಿದ್ಧತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಊರಿಗೆ ಉತ್ತಮ ರಸ್ತೆ ಮಾಡಿಕೊಡುವುದಾಗಿ ಹೇಳಿ ಕಳಪೆ ಕಾಮಗಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ಸಿದ್ದಾಪುರದ ಬೇಡ್ಕಣಿಯಲ್ಲಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಸ್ಪೀಕರ್ ಅವರಿಗೆ ಶಂಕುಸ್ಥಾಪನೆಗೂ ಆವಕಾಶ ನೀಡದೆ ವಾಪಸ್ ಕಳುಹಿಸಲಾಯಿತು.
ಈ ಹಿಂದೆ ಬೇಡ್ಕಣಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಮಾಡಲಾಗಿತ್ತು. ಗುಣಮಟ್ಟ ಕಳಪೆಯಾಗಿದ್ದರಿಂದ ಜಲ್ಲಿಕಲ್ಲುಗಳು ಕಿತ್ತು ಬಂದಿದ್ದು, ಮತ್ತೆ ಮುಂದುವರೆದ 300 ಮೀಟರ್ ಕಾಮಗಾರಿಗಾಗಿ ಸ್ಪೀಕರ್ ಕಾಗೇರಿ ಇಂದು ಶಂಕುಸ್ಥಾಪನೆಗೆ ಆಗಮಿಸಿದ್ದರು. ಈ ವೇಳೆ ಕೆಲವು ತಿಂಗಳ ಹಿಂದೆ ಮಾಡಿದ ಕಾಮಗಾರಿಯೇ ಕಳಪೆಯಾಗಿರುವಾಗ ಮತ್ತೆ ಕಳಪೆ ಮಾಡಿ ನಮ್ಮೂರ ರಸ್ತೆ ಹದಗೆಡಿಸಬೇಡಿ, 300 ಮೀಟರ್ ಸಿಮೆಂಟ್ ರಸ್ತೆ ಬದಲಿಗೆ ಸಂಪೂರ್ಣ ಟಾರ್ ರಸ್ತೆ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಒಪ್ಪಿದ ಸ್ಪೀಕರ್, ಶಂಕುಸ್ಥಾಪನೆ ಮಾಡದೆ ಅಲ್ಲಿಂದ ಮರಳಿದರು.
ಇದನ್ನೂ ಓದಿ:ಕೇರಳ: ಸ್ಪೀಕರ್ ಕಚೇರಿ ಎದುರು ಶಾಸಕರ ಘರ್ಷಣೆ, ನಾಲ್ವರಿಗೆ ಗಾಯ