ದಾವಣಗೆರೆ: ಪ್ರಚಾರಕ್ಕೆ ಬಂದ ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರಿಂದ ತರಾಟೆ - ಈಟಿವಿ ಭಾರತ ಕರ್ನಾಟಕ
ದಾವಣಗೆರೆ: ಹೊನ್ನಾಳಿ - ನ್ಯಾಮತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಕಂಕನಹಳ್ಳಿಯಲ್ಲಿ ನಡೆದಿದೆ. ಪ್ರಚಾರಕ್ಕೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಕಂಕನಹಳ್ಳಿಗೆ ಆಗಮಿಸಿದ ವೇಳೆ ಅವರನ್ನು ಸುತ್ತುವರೆದ ಗ್ರಾಮಸ್ಥರು ಗ್ರಾಮದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶಾಸಕರಾಗಿ ಗ್ರಾಮಕ್ಕೆ ಏನು ಕೂಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ನೀವು ಕಂಕನಹಳ್ಳಿ ಗ್ರಾಮದಲ್ಲಿ ಅಭಿವೃದ್ದಿ ಕೆಲಸ ಮಾಡಿಲ್ಲ, ಐದು ವರ್ಷಗಳಿಂದ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ ಎಂದು ಆರೋಪಿಸಿದ ಗ್ರಾಮಸ್ಥರು ರೇಣುಕಾಚಾರ್ಯ ಗ್ರಾಮದಲ್ಲಿ ಪ್ರಚಾರ ನಡೆಸುವುದಕ್ಕೆ ಅಡ್ಡಿಪಡಿಸಿದರು. ಈ ವೇಳೆ ರೇಣುಕಾಚಾರ್ಯ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಗ್ರಾಮಸ್ಥರು ಅವರ ಮಾತಿಗೆ ಕಿವಿಗೊಡಲಿಲ್ಲ.
ನಂತರ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆಸಿದ ಶಾಸಕ ರೇಣುಕಾಚಾರ್ಯ, ನನಗೆ ವಿರುದ್ಧವಾಗಿ ಮಾತನಾಡಲು ಯಾರೂ ನಿಮಗೆ ಪ್ರಚೋದನೆ ಕೊಟ್ಟಿದ್ದಾರೆ. ಹಾಗಾಗಿ ನೀವು ನನ್ನ ವಿರುದ್ಧ ಈ ರೀತಿಯಾಗಿ ಮಾತನಾಡುತ್ತಿದ್ದೀರಿ ಎಂದು ಗ್ರಾಮಸ್ಥರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಗ್ರಾಮದಿಂದ ಹೊರಟು ಹೋದರು.
ಇದನ್ನೂ ಓದಿ:ಪ್ರಚಾರದಲ್ಲಿ ತೊಡಗಿದ್ದ ಪರಮೇಶ್ವರ್ ಮೇಲೆ ಕಲ್ಲೆಸೆತ: ಮಾಜಿ ಡಿಸಿಎಂ ತಲೆಗೆ ಗಾಯ