Watch.. ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ - ಶಿವಲೀಲಾ ಪರ್ವತ ಗೌಡರ
ಬೆಳಗಾವಿ: ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ಅಶೋಕ ವೃತ್ತದ ಕೋಟೆ ಕೆರೆಯಲ್ಲಿ ಇಂದು ನಡೆದಿದೆ. ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಶಿವಲೀಲಾ ಪರ್ವತ ಗೌಡರ (42) ಕೆರೆಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಈ ಮಹಿಳೆ ಯತ್ನಿಸಿದ್ದರು.
ಕೆರೆಯಲ್ಲಿ ಮಹಿಳೆ ಮುಳುಗುತ್ತಿರುವ ಸುದ್ದಿ ತಿಳಿದ ತಕ್ಷಣವೇ ಅಲ್ಲಿಯೇ ಅಶೋಕ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ್ ಅವರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಶೀನಾಥ ಅವರ ಸಮಯ ಪ್ರಜ್ಞೆ ಮತ್ತು ಸಾಹಸಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, 5 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಪದಕಕ್ಕೆ ಕಾಶೀನಾಥ ಅವರ ಹೆಸರನ್ನು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತ: ಉತ್ತರಾಖಂಡದಲ್ಲಿ ಸಿಲುಕಿದ 15 ಮಂದಿ ಕನ್ನಡಿಗರು - ವಿಡಿಯೋ