ಕೆ ಗುಡಿಯಲ್ಲಿ ಹುಲಿ ದರ್ಶನ: ಪ್ರವಾಸಿಗರ ಮುಂದೆ ಟೆರಿಟರಿ ಗುರುತಿಸಿದ ವ್ಯಾಘ್ರ - ಬಿಳಿಗಿರಿರಂಗನ ಬೆಟ್ಟ ವನ್ಯಜೀವಿ ಅಭಯಾರಣ್ಯ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೆ. ಗುಡಿ ಎಂದೇ ಪ್ರಸಿದ್ಧವಾಗಿರುವ ಕ್ಯಾತದೇವರ ಗುಡಿ ಸಫಾರಿಯಲ್ಲಿ ಹುಲಿರಾಯ ದರ್ಶನ ಕೊಟ್ಟಿದ್ದು, ಪ್ರವಾಸಿಗರು ವ್ಯಾಘ್ರನನ್ನು ಕಂಡು ರೋಮಾಂಚನಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ವನ್ಯಜೀವಿ ಅಭಯಾರಣ್ಯದಲ್ಲಿರುವ ಕೆ ಗುಡಿ ಸುಂದರವಾದ ವನ್ಯಜೀವಿ ಅಭಯಾರಣ್ಯವಾಗಿದ್ದು, ಸಫಾರಿಗೆ ಪ್ರಸಿದ್ಧವಾಗಿದೆ.
ಪ್ರವಾಸಿಗರು ಕೆ ಗುಡಿಯಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ಹುಲಿರಾಯ ಕಾಣಿಸಿಕೊಂಡಿದ್ದು ಅಷ್ಟೇ ಅಲ್ಲದೇ, ಗಾಂಭೀರ್ಯದಿಂದ ಹೆಜ್ಜೆ ಹಾಕುವ ಹುಲಿ ಮರವೊಂದರ ಬಳಿ ತನ್ನ ಸರಹದ್ದನ್ನು ಗುರುತಿಸುವ ಕೆಲಸ ಮಾಡಿದೆ. ಮರವನ್ನು ಉಗುರಿನಿಂದ ಗೀರುವುದು, ಮೂತ್ರ ವಿಸರ್ಜನೆ ಮಾಡುವ ಮೂಲಕ ಹುಲಿಗಳು ತಮ್ಮ ಸರಹದ್ದುಗಳನ್ನು ಗುರುತಿಸಿಕೊಳ್ಳುತ್ತವೆ. ಇದೇ ರೀತಿ ಸಫಾರಿ ವೇಳೆ ಕಾಣಿಕೊಂಡ ಹುಲಿ ಮಾಡಿದೆ. ಕ್ಯಾತದೇವರ ಗುಡಿ ಸಮೃದ್ಧ ವನ್ಯಸಂಪತ್ತು ಹೊಂದಿದ್ದು, ಪಕ್ಷಿ ವೀಕ್ಷಣೆ ಮತ್ತು ಪ್ರಕೃತಿ ಸವಿಯಲು ಹೇಳಿ ಮಾಡಿಸಿದ ಸ್ಥಳವಾಗಿದ್ದು, ಹುಲಿಗಳ ದರ್ಶನ ತೀರಾ ಅಪರೂಪವಾದ್ದರಿಂದ ಹುಲಿಯನ್ನು ಕಂಡ ಸಫಾರಿಗರು ಮುದಗೊಂಡಿದ್ದಾರೆ.
ಇದನ್ನೂ ಓದಿ:ಒಟ್ಟಿಗೆ ನಾಲ್ಕು ಹುಲಿ ಮರಿಗಳು ಪತ್ತೆ: ತಾಯಿ ಹುಲಿಗಾಗಿ 300 ಅಧಿಕಾರಿಗಳು, ಸಿಬ್ಬಂದಿಯಿಂದ ಶೋಧ ಕಾರ್ಯ