ಇಡೀ ರಾಜ್ಯದ ವ್ಯವಸ್ಥೆ ಹಾಳು ಮಾಡಿದ್ದು ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ
ಕೊಪ್ಪಳ: "ರಾಜ್ಯದಲ್ಲಿ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಇಡೀ ರಾಜ್ಯದ ವ್ಯವಸ್ಥೆಯನ್ನು ಹಾಳು ಮಾಡಿದ್ದರು" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅಧಿಕಾರಕ್ಕೆ ಬಂದೊಡನೆ ಶಾಲಾ ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತಿದರು. ವೀರಶೈವ ಧರ್ಮ ಒಡೆಯಲು ಯತ್ನಿಸಿದರು. ಟಿಪ್ಪು ಜಯಂತಿ ಮಾಡುವ ಮೂಲಕ ಹೆಜ್ಜೆಹೆಜ್ಜೆಗೂ ಸಾಮಾಜಿಕ ವ್ಯವಸ್ಥೆಯನ್ನು ಹಾಳುಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ" ಎಂದರು.
"ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಮೇಲೆ ಪಿಎಫ್ಐ ಸಂಘಟನೆ ನಿಷೇಧ ಮಾಡಲಾಯಿತು. ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದ ಮಂಗಳೂರು, ಬೆಂಗಳೂರು, ಮೈಸೂರು ಸೇರಿ ವಿವಿಧ ಪ್ರಕರಣಗಳಡಿ ಜೈಲಿನಲ್ಲಿದ್ದ ಪಿಎಫ್ಐ ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಮುಸ್ಲಿಂ ಮತಗಳಿಗಾಗಿ ಓಲೈಕೆಯ ರಾಜಕಾರಣ ಮಾಡುತ್ತಿದೆ. ಬಿಜೆಪಿ ಅಂತಹ ರಾಜಕಾರಣ ಮಾಡುವುದಿಲ್ಲ" ಎಂದು ಹರಿಹಾಯ್ದರು.
"ಟಿಪ್ಪುನನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯಬೇಕು ಎಂಬ ಆಶ್ವತ್ಥ್ ನಾರಾಯಣ ಹೇಳಿಕೆ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ಈ ರೀತಿಯಾಗಿ ಮಾತನಾಡುವುದು ನೂರಕ್ಕೆ ನೂರು ತಪ್ಪು. ಆ ರೀತಿ ಯಾರೂ ಹೇಳಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರವರ ಪಕ್ಷ ಅವರವರ ಸಿದ್ದಾಂತ. ಸಿದ್ದಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು" ಎಂದು ಹೇಳಿದರು.
ಇದನ್ನೂ ಓದಿ:ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್ವೈ