ಉಚಿತ ಬಸ್ಸು.. ಎಲ್ಲೆಲ್ಲೂ ರಶ್, ಕಾದು ಕಾದು ಮಹಿಳೆಯರು ಸುಸ್ತು..! - ಶಕ್ತಿ ಯೋಜನೆ ಜಾರಿ
ಚಿಕ್ಕಮಗಳೂರು:ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ವೀಕೆಂಡ್ ಶುರುವಾಗುತ್ತಲೇ ಬಸ್‌ಗಳಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್.. ಫ್ರೀ ಪ್ರಯಾಣ ಅಂತ ಮಹಿಳೆಯರು ಪ್ರವಾಸಿ ಸ್ಥಳಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ.
ಜಿಲ್ಲೆಯ ಶೃಂಗೇರಿಯಲ್ಲಿ ಬಸ್‌ಗಾಗಿ ನಿಲ್ದಾಣದಲ್ಲಿ ಕಾದು, ಕುಳಿತು ಕೊನೆಗೆ ಬಸ್ ಬಂದಾಗ ಹತ್ತಲು ಮುಗಿಬೀಳುತ್ತಿದ್ದಾರೆ. ಮಹಿಳೆಯರು ಬಸ್‌ನಲ್ಲಿ ಸೀಟ್ಗಳು ಖಾಲಿ ಇಲ್ಲ, ಕಾಲು ಇಡಲು ಜಾಗ ಇಲ್ಲವೆಂದರೂ, ಏನಾದರೂ ಆಗಲಿ ಎನ್ನುತ್ತ ಕೊನೆಗೆ ಡ್ರೈವರ್ ಸೀಟ್ ಇರುವ ಸ್ಥಳದಿಂದಲೇ ಮಹಿಳೆಯರು ಹತ್ತುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಧಾರ್ಮಿಕ ಸ್ಥಳ ಶೃಂಗೇರಿಗೆ ಹೋಗಲು ಅಪಾರ ಜನ ಬರುತ್ತಿದ್ದು, ಅದರಲ್ಲೂ ಮಹಿಳೆಯರೇ ಹೆಚ್ಚಾಗಿದ್ದಾರೆ. ಶೃಂಗೇರಿಯಲ್ಲಿ ಬಸ್ ಫುಲ್ ರಶ್ ಆಯ್ತು ಅಂತ ಹೇಳಿದ್ರೂ, ಡ್ರೈವರ್ ಸೀಟ್ ಮೂಲಕ ಮಹಿಳೆಯೊಬ್ಬರು ಮಕ್ಕಳ ಸಮೇತ ಹತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಸರ್ಕಾರಿ ಬಸ್‌ಗಳು ಕಿಕ್ಕಿರಿದು ಮಹಿಳೆಯರಿಂದ ತುಂಬಿ ಹೋಗುತ್ತಿವೆ.
ಇನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣವೂ ಧಾರವಾಡ, ಹುಬ್ಬಳ್ಳಿ, ಹರಿಹರ, ಚಿತ್ರದುರ್ಗ, ಹರಿಹರ, ಹಾಸನ ಹಾಗೂ ನಾನಾ ಊರುಗಳಿಂದ ಆಗಮಿಸಿದ ಮಹಿಳೆಯರಿಂದ ತುಂಬಿ ತುಳುಕುತ್ತಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗಲು ತಾವು ತಂದಿರೋ ರೊಟ್ಟಿ-ಚಟ್ನಿ ತಿನ್ನುತ್ತ ಇಡೀ ದಿನ ಕೊಟ್ಟಿಗೆಹಾರ ಬಸ್ ಸ್ಟ್ಯಾಂಡ್ ನಲ್ಲಿ 400-500 ಮಹಿಳೆಯರು ಬಸ್ಸಿಗಾಗಿ ಕಾಯುತ್ತಿದ್ದಾರೆ. 8-10 ಖಾಸಗಿ ಬಸ್ ಗಳಿದ್ದರೂ ಮಹಿಳೆಯರು ಹೋಗುತ್ತಿಲ್ಲ. ಬಸ್ ನಿಲ್ದಾಣದಲ್ಲಿ 100-200 ದುಡ್ಡು ಖರ್ಚು ಮಾಡ್ತಾರೆ. ಖಾಸಗಿ ಬಸ್ ಗೆ 60-70 ರೂ. ಕೊಟ್ಟು ಹೋಗ್ತಿಲ್ಲ. ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್ಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಇರೋ ನಾಲ್ಕೈದು ಫ್ರೀ ಬಸ್ಗಳಿಗೆ ಕಾದು ಕಾದು ಮಹಿಳೆಯರು ಸುಸ್ತಾಗುತ್ತಿದ್ದಾರೆ. ಬಸ್ ಹತ್ತಲು ಮಹಿಳೆಯರ ಅಬ್ಬರ ಕಂಡು ಕಾಲೇಜಿಗೆ ಹೋಗುವ ಯುವಕರು ಬಸ್ ಹತ್ತುವುದಕ್ಕೆ ಹಿಂದೆ ಸರಿಯುತ್ತಿದ್ದಾರೆ.