ಚೆಂಡೆವಾದ್ಯ ಬಾರಿಸಿ ಅಭ್ಯರ್ಥಿ ಪರ ಮತಯಾಚಿಸಿದ ರಾಘವ್ ಚಡ್ಡಾ - karnataka assembly election2023
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಪುಲಕೇಶಿನಗರದ ಪಕ್ಷದ ಅಭ್ಯರ್ಥಿ ಸುರೇಶ್ ರಾಥೋಡ್ ಅವರನ್ನು ಬೆಂಬಲಿಸಿ ಮತ ಯಾಚಿಸಿದರು. ಪ್ರಚಾರಕ್ಕೂ ಮುನ್ನ ರಾಘವ್ ಚಡ್ಡಾ ಸಾಂಪ್ರದಾಯಿಕ ಚೆಂಡೆವಾದ್ಯ ಬಾರಿಸುವ ಮೂಲಕ ಪ್ರಚಾರ ಆರಂಭಿಸಿದರು. ಈ ವೇಳೆ ಆಪ್ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇನ್ನು ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಸ್ಟಾರ್ ಪ್ರಚಾರಕರನ್ನು ಪ್ರಕಟಿಸಿವೆ. ಈ ಮೂಲಕ ಈ ಬಾರಿಯ ಚುನಾವಣೆಯನ್ನು ರಂಗೇರಿಸಿದೆ. ಇನ್ನು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನಾಂಕವಾಗಿದೆ.