ಮಂಗಳೂರು: ದೋಣಿ ಮಗುಚಿ ನದಿಯಲ್ಲಿ ಸಿಲುಕಿದ್ದ ಯುವಕನ ರಕ್ಷಣೆ - ವಿಡಿಯೋ
ಉಳ್ಳಾಲ (ದಕ್ಷಿಣಕನ್ನಡ): ಕರಾವಳಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದಲ್ಲದೆ, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರೆಡ್ ಅಲರ್ಟ್ ನಡುವೆಯೂ ನೇತ್ರಾವತಿ ನದಿ ತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕನನ್ನು ರಕ್ಷಿಸಿರುವ ಘಟನೆ ಪಾವೂರು ಹರೇಕಳ- ಅಡ್ಯಾರ್ ಸೇತುವೆಯ ಬಳಿ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿಬಿದ್ದ ಪರಿಣಾಮ ಯುವಕ ನದಿಯಲ್ಲಿ ಸಿಲುಕಿದ್ದನು. ಈ ವೇಳೆ ಸ್ಥಳೀಯ ಯುವಕರು ಧಾವಿಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ಬುಧವಾರ ಬೆಳಗ್ಗೆ ಹರೇಕಳ ಕಡವಿನಬಳಿಯ ಸೇತುವೆ ಸಮೀಪದ ನೇತ್ರಾವತಿ ನದಿಯಲ್ಲಿ ಯುವಕ ಮೀನುಗಾರಿಕೆಗೆ ತೆರಳಿದ್ದನು. ನಿರಂತರವಾಗಿ ಸುರಿದ ಮಳೆಯಿಂದಾಗಿ ನೀರಿನ ಹರಿವು ನದಿಯಲ್ಲಿ ಹೆಚ್ಚಾಗಿತ್ತು. ನೀರಿನ ರಭಸಕ್ಕೆ ದೋಣಿ ಏಕಾಏಕಿ ಮಗುಚಿಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದ ಯುವಕರ ತಂಡ ಸೇತುವೆ ಮೇಲಿನಿಂದ ನದಿಗೆ ಹಗ್ಗವನ್ನು ಇಳಿಸಿ ಯುವಕನನ್ನು ಮೇಲಕ್ಕೆತ್ತಿದ್ದಾರೆ. ಆದರೆ ದೋಣಿ ನೀರುಪಾಲಾಗಿದೆ. ಈ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ :ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ.. ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ವಿಡಿಯೋ