ಚಿಕ್ಕೋಡಿಯಲ್ಲಿ ಮಳೆ ಅವಾಂತರ: ಗಾಳಿ ರಭಸಕ್ಕೆ ಹಾರಿಹೋದ ಮೇಲ್ಛಾವಣಿ
ಚಿಕ್ಕೋಡಿ:ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಸುರಿದಿದ್ದು, ಅಲ್ಲಲ್ಲಿ ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಮಳೆ ಜೊತೆ ರಭಸವಾಗಿ ಗಾಳಿ ಬೀಸಿದ ಹಿನ್ನೆಲೆ ಕಾಡಾಪೂರ ಗ್ರಾಮದಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಮತ್ತೋಂದೆಡೆ ಬೃಹತ್ತಾದ ಮರ ಮನೆ ಮೇಲೆ ಬಿದ್ದು ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹೋಟೆಲ್ ಮೇಲೆ ಬೃಹತ್ತಾದ ಮರ ಬಿದ್ದು ಕಟ್ಟಡದ ಸಂಪೂರ್ಣ ಜಖಂಗೊಂಡಿದೆ. ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಮಳೆ ಜೊತೆ ಗಾಳಿ ಬಿಸಿದ ಪರಿಣಾಮ ಆರೂ ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿ ಸಂಭವಿಸಿದ ವರದಿಯನ್ನು ತಾಲೂಕು ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ.
ಗಾಳಿ ಮಳೆ ರಭಸಕ್ಕೆ ಪಲ್ಟಿಯಾದ ಲಾರಿ: ಭಾರೀ ಮಳೆ ಗಾಳಿಗೆ ಲಾರಿ ಪಲ್ಟಿಯಾಗಿರುವ ಘಟನೆ ಹುಕ್ಕೇರಿ ಪಟ್ಟಣದ ಜಾಬಾಪೂರ ಬಳಿ ನಡೆದಿದೆ. ಸಂಕೇಶ್ವರ ಪಟ್ಟಣದಿಂದ ರಾಮದುರ್ಗಕ್ಕೆ ಬಿದಿರು ಸಾಗಿಸುತ್ತಿದ್ದ ಲಾರಿ ನೆಲಕಚ್ಚಿದೆ. ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಬಿರುಗಾಳಿಗೆ ಈ ಸರಕು ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ: ಐದು ದಿನ ರಾಜ್ಯದಲ್ಲಿ ಮಳೆ, ಅಲರ್ಟ್ ಘೋಷಣೆ...