ಮನುಷ್ಯರಂತೆ ನಡೆಸಿಕೊಳ್ಳದ ಧರ್ಮವು ಕಾಯಿಲೆಯಷ್ಟೇ ಮಾರಕ- ಖರ್ಗೆ: ಪ್ರತಿ ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ ಎಂದ ಮಮತಾ - ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ
Published : Sep 4, 2023, 9:19 PM IST
ಬೆಂಗಳೂರು, ಕೋಲ್ಕತ್ತಾ ;ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆಗೆ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳು ಖಂಡಿಸದಿದ್ದರೂ, ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಯಾವುದೇ ಧರ್ಮವನ್ನು ಟೀಕಿಸುವುದು ಶೋಭೆಯಲ್ಲ. ಯಾವುದೇ ವರ್ಗಕ್ಕೆ ನೋವುಂಟು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ಸಮಾನತೆ ಸಾರದ, ಮಾನವನ ಘನತೆಯನ್ನು ಎತ್ತಿಹಿಡಿಯದ ಯಾವುದೇ ಧರ್ಮ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ, ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಧರ್ಮವು ಕಾಯಿಲೆಯಷ್ಟೇ ಮಾರಕ ಎಂದು ಹೇಳಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ. ಭಾರತ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ಮೂಲವಾಗಿದೆ. ಆದ್ದರಿಂದ, ಯಾವುದೇ ಧರ್ಮದ ಬಗ್ಗೆ ಹೇಳಿಕೆ ನೀಡುವ ಮುನ್ನ ಎಚ್ಚರವಾಗಿರಬೇಕು. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಯಾವುದೇ ಜಾತಿ, ಧರ್ಮವನ್ನು ಖಂಡಿಸುವ ಹೇಳಿಕೆ ನೀಡಬಾರದು ಎಂದು ಸ್ಟಾಲಿನ್ ಮಾತಿಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ. ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ವಿವಾದಿತ ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:ಆರ್ಯ - ದ್ರಾವಿಡ ರಾಜಕಾರಣದ ಮುಂದುವರಿದ ಭಾಗ ಉದಯನಿಧಿ ಸ್ಟಾಲಿನ್ ಹೇಳಿಕೆ: ನಳಿನ್‍ಕುಮಾರ್ ಕಟೀಲ್