ರಾಜಸ್ಥಾನದಲ್ಲಿ ಬಿಜೆಪಿಯ ಮಹಾ ಜನಸಂಪರ್ಕ ಅಭಿಯಾನ: ಬ್ರಹ್ಮ ದೇಗುಲಕ್ಕೆ ಮೋದಿ ಭೇಟಿ, ಪ್ರಾರ್ಥನೆ!
ಜೈಪುರ (ರಾಜಸ್ಥಾನ): ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಒಂದು ತಿಂಗಳ ಕಾಲ ನಡೆಯುವ ಮಹಾ ಜನಸಂಪರ್ಕ ಅಭಿಯಾನ ಆಯೋಜನೆ ಮಾಡಲಾಗಿದೆ. ಇಂದು ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಪ್ರಸಿದ್ಧ ಬ್ರಹ್ಮ ದೇವಾಲಯಕ್ಕೆ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಅಜ್ಮೀರ್ ನಗರದಿಂದ ಸುಮಾರು 15 ಕಿಮೀ ದೂರದಲ್ಲಿರುವ ಪುಷ್ಕರ್‌ನಲ್ಲಿ ಬ್ರಹ್ಮ ದೇವಾಲಯ ಇದೆ. ಇಂದು ಮಧ್ಯಾಹ್ನ ಇಲ್ಲಿನ ಕಿಶನ್‌ಗಢ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಅಜ್ಮೀರ್‌ಗೆ ಬರುವ ಮೊದಲು ನನಗೆ ಪುಷ್ಕರ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ನಮ್ಮ ಗ್ರಂಥಗಳಲ್ಲಿ ಬ್ರಹ್ಮ ದೇವರನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಬ್ರಹ್ಮದೇವನ ಆಶೀರ್ವಾದದಿಂದ ಭಾರತದಲ್ಲಿ ಹೊಸ ಸೃಷ್ಟಿಯ ಯುಗ ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಒಂಬತ್ತು ವರ್ಷ ಪೂರೈಸಿದೆ. ಈ ಒಂಬತ್ತು ವರ್ಷಗಳನ್ನು ನಾಗರಿಕರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಇಲ್ಲಿಂದಲೇ ಮೋದಿ ಮಹಾ ಜನಸಂಪರ್ಕ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಮಹಾ ಜನಸಂಪರ್ಕ ಅಭಿಯಾನ ಅಡಿಯಲ್ಲಿ ಇಂದಿನಿಂದ ಜೂನ್ 30 ರವರೆಗೆ ದೇಶಾದ್ಯಂತ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಉದ್ದೇಶಿಸಿದೆ.
ಇದನ್ನೂ ಓದಿ:ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತ ಬ್ರಿಜ್ ಭೂಷಣ್‌ಗೆ ಅಯೋಧ್ಯೆ ಸ್ವಾಮೀಜಿಗಳ ಬೆಂಬಲ