ಶಿವಮೊಗ್ಗದಲ್ಲಿ ಉತ್ತಮ ಮಳೆ..ಸಂತಸಗೊಂಡ ಜನ - ಹವಾಮಾನ ಇಲಾಖೆ ಮುನ್ಸೂಚನೆ
ಶಿವಮೊಗ್ಗ : ಮಾರ್ಚ್ ತಿಂಗಳ ವೇಳೆಯಲ್ಲಿಯೇ ಎಲ್ಲೆಡೆ ವಿಪರೀತ ಸೆಕೆ ಆರಂಭವಾಗಿದೆ. ಹೀಗಾಗಿ ರಾಜ್ಯದ ಜನ ಬಿಸಿಲಿನ ಬೇಗೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸೆಕೆಯಿಂದ ಪರಿಹಾರವನ್ನು ಕಂಡುಕೊಳ್ಳಲು ಜನ ವಿವಿಧ ತಂಪುಕಾರಕ ವಸ್ತುಗಳಾದ ಫ್ಯಾನ್, ಎಸಿಗಳ ಮೊರೆ ಹೋಗಿದ್ದಾರೆ. ಆದರೆ ಇವೆಲ್ಲವುಗಳಿಗೂ ಉಪಶಮನ ನೀಡುವಂತೆ ಶಿವಮೊಗ್ಗದಲ್ಲಿ ಇಂದು ಸಂಜೆ ವೇಳೆಗೆ ಮಳೆ ಸುರಿದು ಭೂಮಿ ತಣ್ಣಗಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಸಂತಸಗೊಂಡಿದ್ದಾರೆ.
ನಿನ್ನೆಯಿಂದಲೇ ಮಲೆನಾಡಿನ ಪ್ರದೇಶವಾದ ಶಿವಮೊಗ್ಗದಲ್ಲಿ ಮೋಡಕವಿದ ವಾತಾವರಣ ಇತ್ತು. ಅಲ್ಲಲ್ಲಿ ನಿನ್ನೆ ತುಂತುರು ಮಳೆಯೂ ಸುರಿದಿತ್ತು. ಇಂದು ಸಹ ಉತ್ತಮ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ ಜನರು ನೆಮ್ಮದಿಯ ಉಸಿರನ್ನು ಬಿಟ್ಟಿದ್ದಾರೆ. ಅಲ್ಲದೇ ಇದರಿಂದ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ರೈತರಿಗೆ ಅನುಕೂಲವಾದಂತಾಗಿದೆ.
ಸಮುದ್ರದ ಮೇಲ್ಮೈಸುಳಿಗಾಳಿಯಿಂದಾಗಿ ರಾಜ್ಯದ ವಿವಿಧೆಡೆ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಾರ್ಚ್ 14ರಿಂದ 18ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು. ಅದರಂತೆ ನಿನ್ನೆಯಿಂದ ಹಲವೆಡೆ ಉತ್ತಮ ಮಳೆಯಾಗುತ್ತಿದೆ.
ಇದನ್ನೂ ಓದಿ :ಬಿಸಿಲ ಬೇಗೆಯಿಂದ ಸುಡುತಿದ್ದ ಧರೆಗೆ ತಂಪೆರದ ವರುಣ: ಕೊಡಗಿನಲ್ಲಿ ಉತ್ತಮ ಮಳೆ