ಸೆಲ್ಫಿಗಾಗಿ ಹೆಲಿಪ್ಯಾಡ್ ಬಳಿ ಬಂದ ವ್ಯಕ್ತಿಯನ್ನು ಹೊಡೆದು ಓಡಿಸಿದ ಭದ್ರತಾ ಸಿಬ್ಬಂದಿ - ವಿಡಿಯೋ ವೈರಲ್ - ರುದ್ರಪ್ರಯಾಗ್
ರುದ್ರಪ್ರಯಾಗ್ (ಉತ್ತರಾಖಂಡ): ವಿಶ್ವಪ್ರಸಿದ್ಧ ಕೇದಾರನಾಥ್ನಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಹೆಲಿಪ್ಯಾಡ್ನಲ್ಲಿ ನಿಂತಿದ್ದ ಹೆಲಿಕಾಪ್ಟರ್ ಮುಂದೆ ಸೆಲ್ಫಿ ತೆಗೆದುಕೊಳ್ಳು ಮುಂದಾದಾಗ ಆತನನ್ನು ಭದ್ರತಾ ಸಿಬ್ಬಂದಿ ಹೊಡೆದು ಓಡಿಸಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳು ಹೆಲಿಕಾಪ್ಟರ್ ಹಾರಾಟ ಮಾಡುತ್ತಿದ್ದ ಹೆಲಿಪ್ಯಾಡ್ ಬಳಿ ಬಂದಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ವ್ಯಕ್ತಿ ಬಳಿ ದೌಡಾಯಿಸಿ, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಮತ್ತಿಬ್ಬರು ಭದ್ರತಾ ಸಿಬ್ಬಂದಿ ಬಂದು ವ್ಯಕ್ತಿಗೆ ಕಾಲಿನಿಂದ ಒದ್ದು, ಅಲ್ಲಿಂದ ಓಡಿಸಿದ್ದಾರೆ.
ಸದ್ಯ ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರು ಭದ್ರತಾ ಸಿಬ್ಬಂದಿ ವ್ಯಕ್ತಿಯ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಭದ್ರತಾ ಸಿಬ್ಬಂದಿ ಮಾಡಿದ್ದು ಸರಿಯಾಗಿಯೇ ಇದೆ. ವ್ಯಕ್ತಿ ಸೆಲ್ಫಿಗಾಗಿ ಹೆಲಿಕಾಪ್ಟರ್ ಬಳಿ ಹೋಗಿದ್ದರೆ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ಕೇದಾರನಾಥ ದೇಗುಲದ ಆವರಣದಲ್ಲಿ ರೀಲ್ಸ್ಗಳಿಗಾಗಿ ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳು ವಿಡಿಯೋಗಳನ್ನು ಮಾಡುತ್ತಿರುವುದು ಹೆಚ್ಚುತ್ತಿವೆ. ದೇವಸ್ಥಾನದ ಆಡಳಿತ ಮಂಡಳಿಯ ವಿರೋಧದ ನಡುವೆಯೂ ದೇವಾಲಯದ ಆವರಣದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಈ ಸಂಬಂಧ ಅಧಿಕಾರಗಳು ಕ್ರಮಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರು: ಸವಾರರು ಸೇರಿ ಐವರ ಬಂಧನ