ರಾಜಕೀಯ ಪಕ್ಷಗಳ ಪೋಸ್ಟರ್ಗೆ ಬಣ್ಣ ಬಳಿಯುತ್ತಿರುವ ಪಾಲಿಕೆ ಸಿಬ್ಬಂದಿ: ವಿಡಿಯೋ
ಮೈಸೂರು: ರಾಜ್ಯ ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಹಾಗೂ ಸರ್ಕಾರದ ಸಾಧನೆಗಳ ಪೋಸ್ಟರ್ಗಳಿಗೆ ಪಾಲಿಕೆ ಸಿಬ್ಬಂದಿ ಕೆಂಪು ಬಣ್ಣ ಬಳಿಯುತ್ತಿದ್ದಾರೆ. ಸರ್ಕಾರಿ ಕಟ್ಟಡಗಳ ಮೇಲಿರುವ ಬರಹಗಳನ್ನು ಮಾತ್ರ ಅಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಫ್ಲೆಕ್ಸ್ಗಳನ್ನು ತೆರವು ಮಾಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಮೈಸೂರು ನಗರದಲ್ಲಿ ಬಿಜೆಪಿ ಸರ್ಕಾರದ ಭರವಸೆಯ ಪೋಸ್ಟರ್ಗಳನ್ನು ನಗರದ ಎಲ್ಲಾ ಕಡೆ ಹಾಕಲಾಗಿತ್ತು. ಈ ಬಗ್ಗೆ ಗಮನ ಹರಿಸಿರುವ ಚುನಾವಣಾ ಆಯೋಗವು ಮಹಾನಗರ ಪಾಲಿಕೆಗೆ ಸರ್ಕಾರಿ ಕಟ್ಟಡಗಳ ಮೇಲಿನ ಪೋಸ್ಟರ್ಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮೊದಲು ಸರ್ಕಾರದ ಕಟ್ಟಡಗಳ ಮೇಲಿನ ರಾಜಕೀಯ ಪಕ್ಷಗಳ ಪೋಸ್ಟರ್ಗಳನ್ನು ಕೆಲವೆಡೆ ತೆಗೆದು ಹಾಕಿದ್ರೆ, ಮತ್ತೆ ಕೆಲವು ಕಡೆಗಳಲ್ಲಿ ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ.
ಒಂದೆಡೆ ಬಿಜೆಪಿಯ ಭರವಸೆ ಪೋಸ್ಟರ್ಗಳ ಮೇಲೆ ಮೈಸೂರು ಮಹಾನಗರ ಪಾಲಿಕೆ ಬಣ್ಣ ಬಳಿಯುತ್ತಿದ್ದರೆ ಮತ್ತೊಂದು ಕಡೆ, ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು, ಮಹಾರಾಣಿ ಪ್ರೌಢಶಾಲೆ ಬಳಿಯ ಗೋಡೆಯ ಮೇಲಿದ್ದ ಬಿಜೆಪಿ ಭರವಸೆಯ ಪೋಸ್ಟರ್ ಪಕ್ಕದಲ್ಲಿ, 'ಭರವಸೆ, ಭರವಸೆ ಬುರುಡೆ ಭರವಸೆ, ಸಾಕು ಕಿವಿ ಮೇಲೆ ಹೂವು' ಎಂಬ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ:ಮೈಸೂರಲ್ಲೂ ಬಿಜೆಪಿ ವಿರುದ್ಧ ಕಾಂಗ್ರೆಸ್ನಿಂದ ಕಿವಿ ಮೇಲೆ ಹೂವ ಅಭಿಯಾನ..