ಲೋಕಸಭೆ ಚುನಾವಣೆಗೆ ಸ್ಪರ್ಧೆ: ಪಕ್ಷದ ತೀರ್ಮಾನಕ್ಕೆ ಬದ್ಧ- ಸಂಸದ ಸಂಗಣ್ಣ ಕರಡಿ - Upcoming Lok Sabha Elections
ಕೊಪ್ಪಳ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 12 ಕ್ಷೇತ್ರಗಳ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ. ಈ ವಿಚಾರದ ಕುರಿತು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
''ಪಕ್ಷದ ಹೈಕಮಾಂಡ್ ಕೊಪ್ಪಳ ಕ್ಷೇತ್ರದ ಲೋಕಸಭೆಗೆ ಟಿಕೆಟ್ ನೀಡುವ ಕುರಿತು ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಸ್ವಾಗತಿಸುತ್ತೇನೆ. ಈ ಕುರಿತಂತೆ ಇದುವರೆಗೂ ಅವರು ನಮ್ಮ ಬಳಿ ಏನೂ ಚರ್ಚೆ ಮಾಡಿಲ್ಲ. ಪಕ್ಷ ಒಂದು ವೇಳೆ ಇನ್ನೊಂದು ಅವಧಿಗೆ ನೀವೇ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ, ಬೇಡ ಎಂದರೆ ಬಿಡುವೆ'' ಎಂದರು.
''ನಿನ್ನೆ ಕೂಡ ಪಾರ್ಲಿಮೆಂಟರಿ ಸಭೆ ಕರೆದಿದ್ದರು. ಆದರೆ, ಈ ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಹೈಕಮಾಂಡ್ ಆಲೋಚನೆ ಮಾಡಿರಬಹುದು. ನಾನು ಕೂಡ ಇಂದಿನ ಪತ್ರಿಕೆಯನ್ನು ಗಮನಿಸಿದ್ದೇನೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ವಿರೋಧವಿಲ್ಲ. ಪಕ್ಷ ಸ್ಪರ್ಧೆ ಮಾಡುವಂತೆ ಹೇಳಿದರೆ ಸ್ಪರ್ಧಿಸುವೆ, ಇಲ್ಲವೆಂದರೆ ಇಲ್ಲ. ನಮ್ಮದು ನಿವೃತ್ತಿಯಾಗುವ ಸಮಯ. ನಮಗೂ ರಾಜಕಾರಣದಿಂದ ರಿಲೀಫ್ ಸಿಗುತ್ತದೆ ಎಂದು ಭಾವಿಸಿಕೊಳ್ಳುತ್ತೇವೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಟಿಕೆಟ್ ಕೊಟ್ಟರೂ ಸರಿ, ಕೊಡದಿದ್ದರೂ ಸರಿ. ಟಿಕೆಟ್ ನೀಡದಿದ್ದರೆ ಸಕ್ರಿಯ ರಾಜಕಾರಣದಲ್ಲಿದ್ದು ನಮ್ಮ ಕೈಯಿಂದ ಏನು ಕೆಲಸ ಮಾಡಲು ಸಾಧ್ಯವಾಗುತ್ತದೋ ಅದನ್ನು ಮಾಡುವೆ'' ಎಂದು ಹೇಳಿದರು.
ಇದನ್ನೂ ಓದಿ:'ಷರತ್ತು'ಗಳು ಗ್ಯಾರಂಟಿ- ಸರ್ಕಾರದ ಯೋಜನೆಗಳು ನಿಯಮ, ನಿಬಂಧನೆಗಳಿಗೆ ಒಳಪಟ್ಟಿರುತ್ತವೆ: ಪ್ರಿಯಾಂಕ್ ಖರ್ಗೆ