ದೆಹಲಿಯಲ್ಲಿ ತುಲಾಭಾರದ ವೇಳೆ ಬಿದ್ದ ತಕ್ಕಡಿ : ಘಟನೆ ಕುರಿತು ಪೇಜಾವರ ಶ್ರೀ ಹೇಳಿದ್ದೇನು?
Published : Nov 4, 2023, 1:44 PM IST
ಉಡುಪಿ : ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ವರ್ಷ ತುಂಬಿದ ಹಿನ್ನೆಲೆ ದೆಹಲಿಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ತುಲಾಭಾರದ ತಕ್ಕಡಿ ಮುರಿದಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಡುಪಿಯ ಪೇಜಾವರ ಶ್ರೀಗಳು ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ಘಟನೆ ನಡೆದಿದೆ.
ಚಾತುರ್ಮಾಸ್ಯ ಕಾರ್ಯಕ್ರಮ ಮುಗಿದ ಹಿನ್ನೆಲೆ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ನಡೆಸುತ್ತಿದ್ದರು. ಈ ವೇಳೆ ತುಲಾಭಾರದ ತಕ್ಕಡಿ ಏಕಾಏಕಿ ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಶ್ರೀಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಳೆದೆರಡು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಕಳಚಿ ಬಿದ್ದಿದೆ. ಎರಡು ದಿನದಲ್ಲೇ ಗಾಯ ಸಂಪೂರ್ಣ ಮಾಸಿಹೋಗಿದೆ. ಗಾಯದ ಕುರುಹು ಇಲ್ಲದಂತೆ ಎಲ್ಲ ವಾಸಿಯಾಗಿದೆ. ದೊಡ್ಡ ಗಾಯ ಏನು ಆಗಿಲ್ಲ. ನಾನು ಆರಾಮವಾಗಿದ್ದೇನೆ. ಯಾರು ಗಾಬರಿಪಡಬೇಕಿಲ್ಲ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ