ಬೆಂಗಳೂರಿನ ರಸ್ತೆಯಲ್ಲಿ ಹುಡುಗರ ವ್ಹೀಲಿಂಗ್; ಪೋಷಕರ ವಿರುದ್ಧ ಪ್ರಕರಣ ದಾಖಲು - ಈಟಿವಿ ಭಾರತ ಕನ್ನಡ
ಬೆಂಗಳೂರು:ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ದ್ವಿಚಕ್ರ ವಾಹನ ಚಲಾಯಿಸುವುದು ಮತ್ತು ಸಾರ್ವಜನಿಕ ಸಂಚಾರಿ ರಸ್ತೆಗಳ ಮೇಲೆ ವ್ಹೀಲಿಂಗ್ ಮಾಡುವುದು ಬೆಂಗಳೂರಿನಲ್ಲಿ ಆಗಾಗ್ಗೆ ಕಂಡು ಬರುತ್ತದೆ. ಇಂಥವರ ವಿರುದ್ಧ ಪೊಲೀಸರು ನಿರಂತರ ಕ್ರಮ ಕೈಗೊಳ್ಳುತ್ತಿದ್ದರೂ ವ್ಹೀಲಿಂಗ್ ಮಾಡುವವರ ಹಾವಳಿ ಕಡಿಮೆಯಾಗಿಲ್ಲ. ಭಾನುವಾರ ಇಲ್ಲಿಯ ಮುಖ್ಯರಸ್ತೆಯ ಮೇಲೆ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ತಲಘಟ್ಟಪುರ ಸಂಚಾರ ಠಾಣಾ ಪೊಲೀಸರು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಬಾಲಕ ಡಿಯೋ ಸ್ಕೂಟರ್‌ನಲ್ಲಿ ಹಿಂಬದಿ ಮತ್ತೊಬ್ಬನನ್ನು ಕೂರಿಸಿಕೊಂಡು ಬನಶಂಕರಿ 80 ಅಡಿ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ. ವಿಡಿಯೋ ಸೆರೆ ಹಿಡಿದ ಸಾರ್ವಜನಿಕರೊಬ್ಬರು ಸಂಚಾರ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು. ವಾಹನದ ನಂಬರ್ ಆಧರಿಸಿ ಬಾಲಕನ ಮನೆ ಪತ್ತೆ ಮಾಡಿ ವಶಕ್ಕೆೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಆತ ಅಪ್ರಾಪ್ತನಾಗಿದ್ದು ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ. ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಇಬ್ಬರು ಯುವತಿಯರನ್ನು ಕೂರಿಸಿಕೊಂಡು ಅಪಾಯಕಾರಿ ಬೈಕ್ ಸ್ಟಂಟ್, ಆರೋಪಿ ಸೆರೆ- ವಿಡಿಯೋ