ಶಿವಮೊಗ್ಗದಲ್ಲಿ ಯುವ ಉದ್ಯಮಿ ಸಾವು ಪ್ರಕರಣ: ಅಗ್ನಿಶಾಮಕದಳದ ವಿರುದ್ಧ ಕ್ರಮಕ್ಕೆ ಆಗ್ರಹ - ETv Bharat kannada news
ಶಿವಮೊಗ್ಗ:ಜನವರಿ 8ರಂದು ನಗರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟ ಯುವ ಉದ್ಯಮಿ ಶರತ್ ಭೂಪಾಳಂ ಸಾವಿಗೆ ಅಗ್ನಿಶಾಮಕ ದಳದ ವೈಫಲ್ಯವೇ ಕಾರಣ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಮೃತನ ಕುಟುಂಬದವರೂ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಅಗ್ನಿಶಾಮಕ ದಳದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಸಲ್ಲಿಸಿದರು. ಶರತ್ ತಂದೆ ಶಶಿಧರ್ ಭೂಪಾಳಂ ಮಾತನಾಡಿ, "ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು. ಮೊದಲು ಬಂದ ವಾಹನದಲ್ಲಿ ಬೆಂಕಿ ನಂದಿಸಲು ಯಾವುದೇ ಸೂಕ್ತ ಉಪಕರಣಗಳಿರಲಿಲ್ಲ. ಮತ್ತೆ ಬಂದ ಎರಡನೇ ವಾಹನದಲ್ಲಿ ಉದ್ದವಾದ ನೀರಿನ ಪೈಪ್ ಇರಲಿಲ್ಲ. ಸಿಬ್ಬಂದಿ ಬಳಿ ಫೈರ್ ರೆಸಿಸ್ಟೆಂಟ್ ಜಾಕೆಟ್ ಮತ್ತು ಟಾರ್ಚ್ ಕೂಡಾ ಇರಲಿಲ್ಲ. ಒಂದು ವೇಳೆ ಸಿಬ್ಬಂದಿಯ ಬಳಿ ಸಮರ್ಪಕ ಉಪಕರಣಗಳಿದಿದ್ದರೆ ನಮ್ಮ ಮಗ ಸಾಯುತ್ತಿರಲಿಲ್ಲ" ಎಂದರು.