ಪೊಲೀಸರಿಂದ ತಪ್ಪಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ಯುವಕ ಸಾವು; ಪ್ರಕರಣ ಸಿಐಡಿಗೆ
ಬೆಂಗಳೂರು: ಪ್ರಕರಣವೊಂದರಲ್ಲಿ ಬಂಧಿಸಲು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರನ್ನು ಕಂಡ ಯುವಕನೋರ್ವ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಹಮ್ಮದ್ ಹುಸೇನ್ (31) ಮೃತ ಯುವಕ ಎಂದು ಗುರುತಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ನಡೆದಿದ್ದೇನು?: ಸ್ಥಳೀಯ ಯುವತಿಗೆ ಬೆದರಿಕೆ ಹಾಕಿದ ಆರೋಪದಡಿ ಮೊಹಮ್ಮದ್ ಹುಸೇನ್ ವಿರುದ್ಧ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಬೊಮ್ಮನಹಳ್ಳಿಯ ಬೇಗೂರು ರಸ್ತೆಯಲ್ಲಿರುವ ಮನೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿ ತೆರಳಿದ್ದರು. ಪೊಲೀಸರನ್ನು ಕಂಡ ಮೊಹಮ್ಮದ್ ಹುಸೇನ್, ಮನೆಯ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಮೃತನ ಪೋಷಕರು, "ನನ್ನ ಮಗನ ಸಾವಿಗೆ ಪೊಲೀಸರೇ ಕಾರಣ, ಈ ಕುರಿತು ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ :ದಿಢೀರ್ ಶ್ರೀಮಂತರಾಗಲು ಕಾರು ಕದ್ದು ಸಿಕ್ಕಿಬಿದ್ದ ಸ್ನೇಹಿತರು..ಇವರು ಬಿ.ಟೆಕ್ ಪದವೀದರರು ಎಂದರೆ ನೀವು ನಂಬ್ತೀರಾ?