ಕೃಷ್ಣನಾಗಿ ಜಾವಿದ್ ಪಾಷಾ, ಧರ್ಮರಾಯ ರಜಾಕ್ ಸಾಬ್..: ಮುಸ್ಲಿಂ ಪಾತ್ರಧಾರಿಗಳಿಂದ 'ಕುರುಕ್ಷೇತ್ರ' ನಾಟಕ - ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ನೆಲಮಂಗಲ: ಬೇಸಿಗೆ ಪ್ರಾರಂಭದೊಂದಿಗೆ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳ ಸುಗ್ಗಿಯೂ ಶುರುವಾಗುತ್ತಿದೆ. ನೆಲಮಂಗಲ ತಾಲೂಕಿನ ಹಾಲೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಈ ನಾಟಕ ಪ್ರಮುಖ ಪಾತ್ರಗಳಲ್ಲಿ ಮುಸ್ಲಿಂ ಸಮುದಾಯವರೇ ಅಭಿನಯಿಸಿದ್ದು ವಿಶೇಷವಾಗಿತ್ತು. ಇಂಥದ್ದೊಂದು ವಿಶೇಷ ಪ್ರಯೋಗ ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯಿತು. ಹಿಂದೂ ಮತ್ತು ಮುಸ್ಲಿಂ ಸಮುದಾಯವರ ಭಾವೈಕ್ಯತೆಗೆ ಸಾಕ್ಷಿಯಾದ ಕುರುಕ್ಷೇತ್ರ ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು.
ಪ್ರಮುಖ 15 ಪಾತ್ರಗಳಲ್ಲಿ ಮುಸ್ಲಿಮರೇ ಅಭಿನಯಿಸಿದ್ದು, ಹೊಸ ಇತಿಹಾಸಕ್ಕೂ ನಾಂದಿ ಹಾಡಿತು. ಶ್ರೀ ವೀರಾಂಜನೇಯ ಸ್ವಾಮಿ ಕಲಾ ವೃಂದದ ಅಡಿಯಲ್ಲಿ ಮುಸ್ಲಿಂ ರಾಜಕೀಯ ಮುಖಂಡರು, ಶಿಕ್ಷಕರು, ಪೊಲೀಸ್ ಇಲಾಖೆಯವರು, ಉದ್ಯಮಿಗಳು ಸೇರಿ ಕಳೆದ ಮೂರು ತಿಂಗಳಿನಿಂದ ಮುನಿರಾಜು ಎಂಬ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ನಾಟಕದ ತಾಲೀಮು ನಡೆದಿದೆ.
ಕೃಷ್ಣನ ಪಾತ್ರದಲ್ಲಿ ಮೊ.ಜಾವಿದ್ ಪಾಷಾ, ಧರ್ಮರಾಯನಾಗಿ ಅಬ್ದುಲ್ ರಜಾಕ್ ಸಾಬ್, ಭೀಮನಾಗಿ ಏಜಾಜ್, ಮುಜೀಬ್, ಅರ್ಜುನನಾಗಿ ರಜೀದ್ ಸಾಬ್, ಶಹಬಾಜ್ ಖಾನ್, ಅಭಿಮನ್ಯುವಾಗಿ ಸುಭಾನ್, ಸಾತ್ಯಕಿಯಾಗಿ ರಿಜ್ವಾನ್ ಪಾಂಡವರ ವಿಭಾಗದಲ್ಲಿದ್ದರೆ, ಕೌರವರಾಗಿ ದುರ್ಯೋಧನನ ಪಾತ್ರದಲ್ಲಿ ನಯಾಜ್ ಖಾನ್, ಬಲರಾಮನಾಗಿ ಸೈಯದ್ ಚಾಂದ್ ಪಾಷಾ, ಕರ್ಣನಾಗಿ ಹಯಾತ್ ಪಾಷಾ, ದುಶ್ಯಾಸನನಾಗಿ ಸಾದಿಕ್ ಪಾಷಾ, ಸೈಂದವನಾಗಿ ಸಯ್ಯದ್ ಖಲೀಲ್, ಶಕುನಿಯಾಗಿ ಚಾಂದ್ ಪಾಷಾ, ಭೀಷ್ಮ, ದ್ರೋಣರಾಗಿ ನಜೀರ್ ಸಾಬ್, ಜಮೀರ್ ಅಭಿನಯಿಸಿ ಮೆಚ್ಚುಗೆ ಗಳಿಸಿದರು.
ರುಕ್ಮಿಣಿ, ಉತ್ತರೆ, ದ್ರೌಪದಿ, ಕುಂತಿ, ಗಾಂಧಾರಿ ಪಾತ್ರಗಳನ್ನು ಹೊರ ಮಹಿಳಾ ಕಲಾವಿದರಿಗೆ ನೀಡಲಾಗಿತ್ತು. ತಬಲ ವಾದಕರಾಗಿ ತುಮಕೂರಿನ ದೇವರಾಜು, ಕ್ಯಾಸಿಯೋದಲ್ಲಿ ಸೂರ್ಯ, ಕ್ಲಾರೋನೇಟ್ನಲ್ಲಿ ಯೋಗೀಶ್, ತಾಳ ವಾದ್ಯದಲ್ಲಿ ನಿರಂಜನ್ ಸಂಗೀತದ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇದ್ದರು.
ಇದನ್ನೂ ನೋಡಿ:ಕೈಬೀಸಿ ಕರೆಯುತ್ತಿದೆ ಏಷ್ಯಾದ ಅತಿ ದೊಡ್ಡ ಟುಲಿಪ್ ಗಾರ್ಡನ್!- ವಿಡಿಯೋ