ಬಿಷನ್ ಸಿಂಗ್ ಬೇಡಿ ಅಗಲಿಕೆ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟ: ಕಪಿಲ್ ದೇವ್
Published : Oct 24, 2023, 4:58 PM IST
ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ (77) ಅವರು ಸೋಮವಾರ ನಿಧನರಾಗಿದ್ದಾರೆ. ಮಾಜಿ ಆಟಗಾರನ ಅಗಲಿಕೆಯ ಬಗ್ಗೆ ಮಾತನಾಡಿದ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, "ನಾವೆಲ್ಲರೂ ಒಟ್ಟಿಗೆ ಕ್ರಿಕೆಟ್ ಆಡಿದ್ದೆವು. ನಾವೆಲ್ಲರೂ ಒಂದು ದಿನ ಹೊರಡುತ್ತೇವೆ. ಆದರೆ ಕೆಲವರು ನಮ್ಮಿಂದ ಬೇಗ ಅಗಲುತ್ತಾರೆ. ಅವರು ಕ್ರಿಕೆಟ್ ಆಡಿದಾಗಿನಿಂದ ಈವರೆಗೂ ಅವರ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಏಕೆಂದರೆ ಅಂತಹ ಉನ್ನತ ವ್ಯಕ್ತಿತ್ವ ಅವರದು. ಎಲ್ಲಾ ವಿಚಾರಗಳನ್ನೂ ನೇರವಾಗಿ ಹೇಳುವ ಸ್ವಾಭಾವ ಅವರಲ್ಲಿತ್ತು. ಅವರು ತಮ್ಮ ನಿಷ್ಠುರ ಹೇಳಿಕೆಗಳಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂತಹ ವ್ಯಕ್ತಿಯ ಬಗ್ಗೆ ಎರಡು ನಿಮಿಷದಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಇದು ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟ. ಆದರೆ ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ಮಹಾನ್ ವ್ಯಕ್ತಿ. ನನ್ನ ನಾಯಕ, ನನ್ನ ಮಾರ್ಗದರ್ಶಕ ಹಾಗೆಯೇ ನನಗೆಲ್ಲವೂ ಆಗಿದ್ದರು" ಎಂದು ಸ್ಮರಿಸಿದರು.
ಬಿಷನ್ ಸಿಂಗ್ ಬೇಡಿ ಅವರಿಗೆ 1970ರಲ್ಲಿ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬೇಡಿ ಗೌರವಾರ್ಥವಾಗಿ ಒಂದು ಸ್ಟ್ಯಾಂಡ್ಗೆ ಅವರ ಹೆಸರನ್ನಿಟ್ಟಿದೆ. 1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಸಮಯದಲ್ಲಿ ಬಿಷನ್ ಸಿಂಗ್ ಬೇಡಿ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರಂತಹ ಅನೇಕ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶಕರೂ ಆಗಿದ್ದರು.
ಇದನ್ನೂ ಓದಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ