ಬಾದಾಮಿ ಬನಶಂಕರಿ ದೇವಿಗೆ ಕಾಂತಾರ ಅಲಂಕಾರ.. ಭಕ್ತರಿಗೆ ಸಂತಸ
ಬಾಗಲಕೋಟೆ:ಧಾರ್ಮಿಕ ಕೇಂದ್ರ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಭಕ್ತರೊಬ್ಬರು ಹೂವಿನ ಅಲಂಕಾರ ಮಾಡಿಸಿದ್ದಾರೆ. ದೇವಿಗೆ ಕಾಂತಾರ ಮಾದರಿಯಲ್ಲಿ ಹೂವಿನಿಂದ ಅಲಂಕಾರ ಮಾಡಿರುವುದರಿಂದ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಧಿಕ ಮಾಸದಲ್ಲಿ ಹುಣ್ಣಿಮೆ ನಿಮಿತ್ತ ಬೆಂಗಳೂರಿನ ನಾಗರಾಜ ಎಂಬುವವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ದೇವಿಗೆ ಹೂವಿನಿಂದ ಅಲಂಕಾರ ಮಾಡಿಸಿ, ತಮ್ಮ ಹರಕೆಯನ್ನು ಸಲ್ಲಿಸಿದ್ದಾರೆ. ಇಡೀ ದೇವಾಲಯದ ತುಂಬಾ ವಿವಿಧ ಬಗೆಯ ಅಲಂಕಾರ ಮಾಡಿಸಿ, ಗಮನ ಸೆಳೆಯುವಂತೆ ಮಾಡಿದ್ದಾರೆ. ಅಧಿಕ ಮಾಸದಲ್ಲಿ ಹುಣ್ಣಿಮೆ ನಿಮಿತ್ತ ದೇವಿಗೆ ಹೂವಿನಿಂದ ಅಲಂಕಾರ ಮಾಡಿದರೆ, ಸಕಲ ಸಂಕಷ್ಟ ದೂರಾಗಿ, ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ದೇವಿ ಕೃಪೆ ತೋರುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಷಾಢ ನಂತರ ಬರುವ ಹುಣ್ಣಿಮೆಗೆ ಬೆಂಗಳೂರಿನಿಂದ ವಿವಿಧ ಬಗೆಯ ಪುಷ್ಪಗಳನ್ನು ತಂದು ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ಕಾಂತಾರ ಮಾದರಿಯಲ್ಲಿ ದೇವಿಗೆ ಅಲಂಕಾರ ಮಾಡಿರುವುದು ಮತ್ತಷ್ಟು ಗಮನ ಸೆಳೆದಿದೆ. ಇಲ್ಲಿಗೆ ಬಂದಿರುವ ಭಕ್ತರು ದೇವಿಗೆ ವಿಶೇಷ ರೀತಿಯ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಮಂಗಳವಾರ ಹುಣ್ಣಿಮೆ ಜೊತೆಗೆ ಅಧಿಕ ಮಾಸ ಇರುವುದರಿಂದ ರಾಜ್ಯದ ವಿವಿಧ ಪ್ರದೇಶಗಳಿಂದ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪೂಜೆ ನೆರವೇರಿಸಿ, ಭಕ್ತಿಯಿಂದ ದೇವಿಗೆ ಮಾಡಿರುವ ಅಲಂಕಾರ ನೋಡಿ ಸಂತಸಗೊಂಡಿದ್ದಾರೆ.
ಇದನ್ನೂ ಓದಿ:ವಿಡಿಯೋ: ಮೂರನೇ ಆಷಾಢ ಶುಕ್ರವಾರ; ನಾಡ ಅಧಿದೇವತೆಗೆ ಮಹಾಲಕ್ಷ್ಮಿ ಅಲಂಕಾರ