'ಇಂಟರ್‌ನೆಟ್ ನಿಷೇಧ ವಾಪಸ್ ಪಡೆದರೆ ಇನ್ನಷ್ಟು ಆಘಾತಕಾರಿ ವಿಡಿಯೋಗಳು ಬೆಳಕಿಗೆ': ಮಣಿಪುರ ಸಂಸದ ಲೋರೋಹ್ ಪಿಫೋಜ್ - ನಾಗಾ ಪೀಪಲ್ಸ್ ಫ್ರಂಟ್
ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಇಂಟರ್‌ನೆಟ್ ನಿಷೇಧ ವಾಪಸ್ ಪಡೆದರೆ ಇಂತಹ ಇನ್ನಷ್ಟು ವಿಡಿಯೋಗಳು ಸಾರ್ವಜನಿಕ ವಲಯದಲ್ಲಿ ಬೆಳಕಿಗೆ ಬರಲಿವೆ ಎಂದು ಮಣಿಪುರದ ಹೊರವಲಯ ಲೋಕಸಭೆ ಕ್ಷೇತ್ರದ ಸಂಸದ ಡಾ.ಲೋರೋಹ್ ಪಿಫೋಜ್ ಗುರುವಾರ ಹೇಳಿದ್ದಾರೆ.
ಮಣಿಪುರದಲ್ಲಿ ದೌರ್ಜನ್ಯಕ್ಕೊಳಗಾದದ್ದು ಕೇವಲ ಇಬ್ಬರು ಮಹಿಳೆಯರಲ್ಲ. ಕ್ರೂರ ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗುತ್ತಿರುವ ರಾಜ್ಯದಲ್ಲಿ ಇದೇ ರೀತಿಯ ಅನೇಕ ಪ್ರಕರಣಗಳು ನಡೆದಿವೆ. ಈ ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರವೆಸಗಿದ್ದು, ನನ್ನ ಕ್ಷೇತ್ರದ ಕಾಂಗ್‌ಪೋಕ್ಪಿಯಲ್ಲಿ ಎಂಬುವುದು ದುರದೃಷ್ಟಕರ. ಆ ಪ್ರದೇಶದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿರುವುದನ್ನು ನಾವು ನೋಡಿಲ್ಲ ಎಂದು ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಸಂಸದ ಪಿಫೋಜ್ 'ಈಟಿವಿ ಭಾರತ್'ಗೆ ತಿಳಿಸಿದರು.
ಈ ಘಟನೆ ಯಾವುದೋ ಸಮುದಾಯಗಳಿಗೆ ಸಂಬಂಧಿಸಿದ್ದಲ್ಲ. ಹೆಣ್ಣಿನ ಘನತೆಗೆ ಸಂಬಂಧಿಸಿದ್ದು. ಹೆಣ್ಣಿನ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಮತ್ತು ಅವರ ಬೆತ್ತಲೆ ಮೆರವಣಿಗೆ ಮಾಡುವುದು ಅತ್ಯಂತ ದುರದೃಷ್ಟಕರ. ಇದು ನಾಚಿಕೆಗೇಡಿನ, ಅನಾಗರಿಕ, ಪೈಶಾಚಿಕ ಕೃತ್ಯ... ಕುಕಿ ಸಮುದಾಯಕ್ಕೆ ಮಾತ್ರವಲ್ಲ ಮೈಟಿಸ್ ಸಮುದಾಯದ ಮಹಿಳೆಯರು ಸಹ ನೋವು ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಣಿಪುರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಭೇಟಿ ನೀಡಿದ್ದರು. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವರು ಮಣಿಪುರದಲ್ಲಿ 20ರಿಂದ 25 ದಿನಗಳ ಕಾಲ ಉಳಿದುಕೊಂಡಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅವರು (ಸಚಿವರು) ನಿರೀಕ್ಷಿದಷ್ಟು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.