ಫ್ರಾನ್ಸ್ ರಾಷ್ಟ್ರೀಯ ದಿನದಲ್ಲಿ ಪಾಲ್ಗೊಳ್ಳಲು ಪ್ಯಾರೀಸ್‌ನಲ್ಲಿ ಭಾರತೀಯ ತುಕಡಿಗಳಿಂದ ಅಭ್ಯಾಸ: ವಿಡಿಯೋ
ಪ್ಯಾರಿಸ್:ಫ್ರಾನ್ಸ್ನಲ್ಲಿ ಜುಲೈ 14ರಂದು ನಡೆಯುವ ಬಾಸ್ಟಿಲ್ ಡೇ ಪರೇಡ್ (ರಾಷ್ಟ್ರೀಯ ದಿನಾಚರಣೆ) ನಲ್ಲಿ ಭಾರತೀಯ ಸೇನೆಯೂ ಭಾಗವಹಿಸಲಿದ್ದು, ಇಂದು ಫ್ರಾನ್ಸ್ ಸೇನೆಯ ಜೊತೆಗೆ ಅಭ್ಯಾಸ ನಡೆಸಿತು. ಮೂರು ಪಡೆಯ ತುಕಡಿಗಳು 'ಸಾರೆ ಜಹಾನ್ ಸೇ ಅಚ್ಛಾ ಹಿಂದೂಸ್ತಾನ್ ಹುಮಾರಾ' ಸಂಗೀತಕ್ಕೆ ಹೆಜ್ಜೆ ಹಾಕಿದವು.
ಭಾರತ ವಾಯುಪಡೆ ಸಿಬ್ಬಂದಿ ಫ್ರಾನ್ಸ್ ಸೇನೆ ಜೊತೆ ಸೇರಿ ರಫೇಲ್ ಯುದ್ಧ ವಿಮಾನಗಳನ್ನು ಆಕಾಶದಲ್ಲಿ ಹಾರಿಸುವ ಮೂಲಕ ಅಭ್ಯಾಸ ನಡೆಸಿದರು. ರಫೇಲ್ ಫೈಟರ್ ಜೆಟ್ ತರಬೇತಿಗೆ ಹಲವು ಯುದ್ಧ ವಿಮಾನಗಳು ಫ್ರಾನ್ಸ್‌ನಲ್ಲಿವೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಆಕರ್ಷಕ ವಿಮಾನ ಪ್ರದರ್ಶನ ನಡೆಯಲಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಸ್ಟಿಲ್ ಡೇ ಪರೇಡ್‌ನ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ದಿನದಂದು ಗೌರವ ಅತಿಥಿಯಾಗಿ ವಂದನೆ ಸ್ವೀಕರಿಸಲಿದ್ದಾರೆ. ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತುಕಡಿ ಮುನ್ನಡೆಸಿ ನಾಡಿಗೆ ಹೆಮ್ಮೆ ತಂದ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳುವರು.
ಇದನ್ನೂ ಓದಿ: ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ ಮಂಗಳೂರಿನ ದಿಶಾ ಅಮೃತ್