ಯಾದಗಿರಿಯ ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ: ವಿಡಿಯೋ - ಶಹಾಪುರ ತಾಲೂಕಿನ ಚಾಮನಾಳ ಗ್ರಾಮ
ಯಾದಗಿರಿ:22 ವರ್ಷ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಗುರುವಾರ ಸಂಜೆ ಸ್ವಗ್ರಾಮಕ್ಕೆ ಆಗಮಿಸಿದ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ಅಮೋಘ ಸಿದ್ದಪ್ಪ ಬಾಗೇವಾಡಿ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಯೋಧನ ಪರ ಘೋಷಣೆ ಕೂಗಿ, ಆರತಿ ಬೆಳಗಿ, ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಗ್ರಾಮಸ್ಥರು ಸಂಭ್ರಮಿಸಿದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ವೇಳೆ, ನಿವೃತ್ತ ದೈಹಿಕ ಶಿಕ್ಷಕ ಸುಧಾಕರ್ ಗುಡಿ ಮಾತನಾಡಿ 'ದೇಶದ ಗಡಿಯಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ಶ್ರಮದಿಂದಲೇ ದೇಶದ ವಾಸಿಗಳು ನೆಮ್ಮದಿಯಿಂದ ಇದ್ದಾರೆ. ನಮ್ಮ ಸೈನಿಕರೇ ನಮಗೆ ಹೀರೋಗಳು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ದೇಶ ಸೇವೆ ಮಾಡುವ ಮನೋಭಾವ ಬೆಳೆಯಬೇಕು' ಎಂದರು. ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್ ಪಾಟೀಲ್ ಮಾತನಾಡಿ 'ನಮ್ಮ ಸೈನಿಕರ ಮಹತ್ವವನ್ನು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದಲ್ಲೇ ಬೋದಿಸಬೇಕಿದೆ. ಅವರು ಗಣ್ಯರೆಂದು ತಿಳಿಸಿಕೊಡಬೇಕಿದೆ. ಪ್ರತಿಯೊಂದು ಮನೆಯಿಂದ ಒಬ್ಬ ಸೈನಿಕ ತಯಾರಾಗಬೇಕಿದೆ. ನಿವೃತ್ತಿ ಹೊಂದಿದ ಮೇಲೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನಮ್ಮ ನಿವೃತ್ತಿ ನೌಕರರಿಗೆ ಸಕಾಲಕ್ಕೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು' ಎಂದರು.
'ಪ್ರತಿ ಜಿಲ್ಲೆಯಲ್ಲಿ ಸೈನಿಕ ಭವನಕ್ಕೆ ಜಾಗ ಮಂಜೂರಾತಿ ನೀಡಬೇಕು. ಸರ್ಕಾರದ ವತಿಯಿಂದ ಮಾಜಿ ಸೈನಿಕರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಸೈನಿಕರು ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆಗೆ ಅಲೆದು ಸುಸ್ತಾಗುವ ಪರಿಸ್ಥಿತಿ ಇದೆ. ಸಕಾಲದಲ್ಲಿ ಅವರಿಗೆ ಸರ್ಕಾರಿ ಸೌಲಭ್ಯಗಳು ದೊರೆತರೆ ಅವರು ಕುಟುಂಬಸ್ಥರೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸಬಹುದು' ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ ಜಾನಿ ಮತ್ತು ಖಜಾಂಚಿ ಮರೆಪ್ಪ ಚಂಡು ತಿಳಿಸಿದರು.
"ಸೈನ್ಯದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ನನಗೆ ನಾಗರಿಕರು ತುಂಬು ಹೃದಯದಿಂದ ಬರಮಾಡಿಕೊಂಡು ಸನ್ಮಾನಿಸಿರುವುದು ತುಂಬಾ ಸಂತೋಷ. ಈ ಸನ್ಮಾನವನ್ನು ತಾಯಿ ಮತ್ತು ತಾಯ್ನಾಡಿಗೆ ಸಮರ್ಪಿಸುತ್ತೇನೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಸೈನಿಕನಿರಬೇಕು. ಯುವಕರು ಸೇನೆಗೆ ಸೇರಲು ತಯರಾಗಬೇಕು"- ಅಮೋಘಸಿದ್ಧಪ್ಪ ಬಾಗೇವಾಡಿ, ಸೇವಾ ನಿವೃತ್ತಿ ಹೊಂದಿದ ಸೈನಿಕ.
ಇದನ್ನೂ ಓದಿ:ರಾಯಚೂರು: ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ