ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಜಮಾಮ್-ಉಲ್-ಹಕ್‌ಗೆ ಅದ್ಧೂರಿ ಸ್ವಾಗತ; ಹೇಳಿದ್ದೇನು ಗೊತ್ತೇ? - ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್
Published : Oct 11, 2023, 4:23 PM IST
ಅಮೃತಸರ (ಪಂಜಾಬ್): ಏಕದಿನ ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. ಪಂಜಾಬ್ನ ಅಮೃತಸರ ಗುರು ರಾಮದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ''ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಫೈನಲ್ ಪಂದ್ಯ ಆಡಬೇಕು" ಎಂದು ಪಾಕ್ ಕ್ರಿಕೆಟ್ ತಂಡ ಮಾಜಿ ನಾಯಕರೂ ಆದ ಇಂಜಮಾಮ್ ಇದೇ ಸಂದರ್ಭದಲ್ಲಿ ಹೇಳಿದರು.
''ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವಿನ ಯಾವುದೇ ಪಂದ್ಯವು ವಿಶ್ವಕಪ್ ಫೈನಲ್ಗಿಂತ ಮುಂಚಿನ ಫೈನಲ್ ಆಗಿರುತ್ತದೆ. ವಿಶ್ವಕಪ್‌ನಲ್ಲಿ ಭಾರತ- ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಬೇಕೆಂದು ಜನ ಬಯಸುತ್ತಾರೆ'' ಎಂದು ತಿಳಿಸಿದರು.
ಪ್ರಸ್ತುತ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಇಂಜಮಾಮ್, ''ತಂಡ ಉತ್ತಮವಾಗಿ ಆಡುತ್ತಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ದುಲ್ಲಾ ಶಫೀಕ್ ಹಾಗೂ ಮೊಹಮ್ಮದ್ ರಿಜ್ವಾನ್ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಉತ್ತಮವಾಗಿದೆ. ಪಿಚ್ಗಳು ಕೂಡ ಉತ್ತಮವಾಗಿದ್ದು, ಹೆಚ್ಚಿನ ರನ್ ಕಲೆ ಹಾಕಲು ಸಾಧ್ಯವಾಗುತ್ತಿದೆ. ಹೆಚ್ಚು ಸ್ಕೋರ್ ಗಳಿಸಿದಷ್ಟು ತಂಡಕ್ಕೆ ನೆರವಾಗಲಿದೆ. ಪಾಕಿಸ್ತಾನ ಹೀಗೆಯೇ ತನ್ನ ಪ್ರರ್ದಶನ ಮುಂದುವರೆಸಿದರೆ ಕಪ್ ಗೆಲ್ಲಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಟೋಬರ್ 14ರಂದು ಭಾರತ, ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.
ಇದನ್ನೂ ಓದಿ:ಅಬ್ದುಲ್ಲಾ ಶಫೀಕ್- ರಿಜ್ವಾನ್ ಭರ್ಜರಿ ಜೊತೆಯಾಟ; ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಗೆಲುವು