Himachal Pradesh: ಹಿಮಾಚಲದಲ್ಲಿ ಮತ್ತೆ ಭೂಕುಸಿತ; 5 ಮನೆಗಳು ನೆಲಸಮ, ಇಬ್ಬರು ಸಾವು
ಶಿಮ್ಲಾ (ಹಿಮಾಚಲ ಪ್ರದೇಶ) : ಭೂಕುಸಿತದಿಂದ ಐದು ಮನೆಗಳು ನೆಲಸಮವಾಗಿರುವ ಘಟನೆ ಇಂದು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ನಡೆದಿದೆ. ಇಲ್ಲಿನ ಕೃಷ್ಣನಗರ ಎಂಬಲ್ಲಿ ಭೂಕುಸಿತ ಉಂಟಾಗಿ ಮನೆಗಳು ಕುಸಿದುಬಿದ್ದಿವೆ. ಇದರ ಅವಶೇಷಗಳು ಇಲ್ಲಿಯೇ ಇದ್ದ ಕಸಾಯಿಖಾನೆಯ ಮೇಲೂ ಬಿದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೂಕುಸಿತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಮೊದಲು ನಿಧಾನವಾಗಿ ಗುಡ್ಡ ಕುಸಿಯುತ್ತಿದೆ. ಬಳಿಕ ನೋಡನೋಡುತ್ತಿದ್ದಂತೆಯೇ ಮರಗಳು ಉರುಳಿ ಮನೆಗಳಸಮೇತ ಧರೆಗುರುಳಿವೆ. ಬಿರುಕು ಉಂಟಾಗಿರುವ ಭೂ ಪ್ರದೇಶಗಳಿಂದ ಜನರನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ. ಕುಸಿಯುವ ಹಂತದಲ್ಲಿರುವ ನಾಲ್ಕೈದು ಮನೆಗಳನ್ನು ಮುಂಜಾಗೃತಾ ಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ಆದಿತ್ಯ ನೇಗಿ ತಿಳಿಸಿದರು.
ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಹಿಮಾಚಲದಲ್ಲಿ ಮುಂದಿನ ಎರಡು ದಿನ ಮತ್ತು ಉತ್ತರಾಖಂಡ್ನ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವುದಾಗಿ ಹೇಳಲಾಗಿದೆ. ಈಶಾನ್ಯ ರಾಜ್ಯದ ಭಾಗಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ :ಚಿಕ್ಕಮಗಳೂರು: ಕಾರಿನಡಿ ಸಿಲುಕಿದ ಬೈಕ್ ಎಳೆದೊಯ್ದ ಚಾಲಕ- ವಿಡಿಯೋ