ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ
ಬೆಂಗಳೂರು:ಕರುನಾಡಿಗೆ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೂ ಮುಗಿದಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ರಾಜ್ಯದಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯನವರ ಬೆಂಗಳೂರಿನ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದರಾಮಯ್ಯ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು ಅವರ ನಿವಾಸದ ಮುಂದೆ ಜಮಾಯಿಸುತ್ತಿದ್ದಾರೆ. ಮನೆಯೊಳಗೆ ಅಭಿಮಾನಿಗಳು ಹೋಗದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.
ನಿನ್ನೆಯಿಂದಲೇ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಇಂದು ಈ ಸಂಭ್ರಮ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಶಿವಾನಂದ ವೃತ್ತದ ಸಮೀಪದ ಸರ್ಕಾರಿ ನಿವಾಸದ ಸುತ್ತ ಪೊಲೀಸ್ ಸರ್ಪಗಾವಲು ಕಂಡುಬಂತು.
ಮುಂದಿನ ಮುಖ್ಯಮಂತ್ರಿ ನಿವಾಸಕ್ಕೆ ನಿಗದಿಯಂತೆ ಹೆಚ್ಚುವರಿ ಭದ್ರತೆ ಒದಗಿಸುವ ಕಾರ್ಯ ನಡೆದಿದೆ. ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಯಾವ ನಿವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಆಧರಿಸಿ ಅಲ್ಲಿವರೆಗೂ ಈಗ ವಾಸ್ತವ ಹೂಡಿರುವ ಸರ್ಕಾರಿ ನಿವಾಸಕ್ಕೆ ಭದ್ರತೆ ಮುಂದುವರೆಯಲಿದೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್; 20ಕ್ಕೆ ಪ್ರಮಾಣ ವಚನ